ಹಾವೇರಿ: ಇನ್ನೊಬ್ಬರು ತಪ್ಪು ಮಾಡುತ್ತಾರೆ ಅಂದರೆ ನೀವೂ ತಪ್ಪು ಮಾಡಲಿಕ್ಕೆ ಲೈಸೆನ್ಸ್ ಸಿಕ್ಕ ಹಾಗಾ? ಮುಡಾ ಪ್ರಕರಣದಲ್ಲಿ ಹೈ ಕೋರ್ಟ್ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಸಿದ್ದರಾಮಯ್ಯ ಅವರ ಇಮೇಜ್ ಉಳಿಸಿಕೊಳ್ಳಲು, ನೈತಿಕತೆ ಮೆರೆಯಲು, ತಮಗಿರುವ ಗೌರವ ಉಳಿಸಿಕೊಳ್ಳಲು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್‌ನವರು ಹೇಳುತ್ತಾರೆ ಅಂತ ಅಲ್ಲ, ತನಿಖೆಗೆ ಕೋರ್ಟ್ ಇದೆ. ವಿರೋಧ ಪಕ್ಷ ತನ್ನ ಕೆಲಸ ತಾನು ಮಾಡುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ದ ದೂರು ಬಂದಾಗಿನ ಸ್ಥಿತಿಗೂ, ಗವರ್ನರ್ ಒಪ್ಪಿಗೆ ಕೊಟ್ಟ ಬಳಿಕ ಸೆಷನ್ಸ್ ಕೋರ್ಟ್ ಅಬ್ಸರ್ವೇಶನ್, ಹೈ ಕೋರ್ಟ್ ಅಬ್ಸರ್ವೇಶನ್ ಬಳಿಕ ಬಹಳಷ್ಟು ವ್ಯತ್ಯಾಸ ಆಗಿದೆ. ಹೈಕೋರ್ಟ್ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜಕಾರಣದಲ್ಲಿ ಅವರದ್ದೇಯಾದ ಗುರುತಿದೆ. ತಮ್ಮದೇ ಜನಾಭಿಪ್ರಾಯ ಇದೆ, ಅವರ ಇಮೇಜ್ ಉಳಿಸಿಕೊಳ್ಳಲು, ನೈತಿಕತೆ ಮೆರೆಯಲು ಹಾಗೂ ರಾಜೀನಾಮೆ ನೀಡಬೇಕು ಎಂದು ಹೇಳಿದರು.ಲೋಕಾಯುಕ್ತ ಎಷ್ಟೇ ಸ್ವಾತಂತ್ರ್ಯ ಇದೆ ಅಂದರೂ ಕೂಡಾ ಹೈ ಕೋರ್ಟ್ ನಿರ್ದೇಶನವೂ ಇದೆ. ಲೋಕಾಯುಕ್ತದಲ್ಲಿ ನೇಮಕ ಆಗುವ ಎಲ್ಲಾ ಪೊಲೀಸ್ ಅಧಿಕಾರಿಗಳು ಎಡಿಜಿಪಿ, ಸಿಪಿಐ, ಪಿಎಸ್‌ಐ ಎಲ್ಲರೂ ಗೃಹ ಸಚಿವರು ಹಾಗೂ ಸಿಎಂ ಕಚೇರಿಯಿಂದಲೇ ನೇಮಕ ಆಗಿರುತ್ತಾರೆ. ನಿಮ್ಮ ನೈತಿಕತೆ ಎತ್ತಿ ಹಿಡಿಯಲು ತನಿಖೆಗೆ ಸಹಕರಿಸಿ ರಾಜೀನಾಮೆ ನೀಡಿ. ಮೂರು ತಿಂಗಳ ತನಿಖೆ ಬಳಿಕ ತಪ್ಪಿತಸ್ಥರಲ್ಲ ಅಂದರೆ ಮತ್ತೆ ಬೇಕಾದರೆ ಸಿಎಂ ಆಗಲು ಅವಕಾಶ ಇದೆ ಎಂದು ಹೇಳಿದರು. ಮುಡಾ ವಿಚಾರವಾಗಿ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಈಗ ಆಡಳಿತದಲ್ಲಿ ಇಲ್ಲ, ಈಗ ಮುಡಾ ವಿಚಾರವಾಗಿ ಬಂದಿದೆ. ಅವರು ವಕೀಲರಿದ್ದಾರೆ ತಿಳಿದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.
ಶಿಗ್ಗಾಂವಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಘೋಷಣೆ ಕುರಿತು ಕೇಳಿದ ಪ್ರಶ್ನೆಗೆ 57 ಜನ ಆಕಾಂಕ್ಷಿಗಳೇನು ಇಲ್ಲ. ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಕೋರ್ ಕಮಿಟಿಯಲ್ಲೂ ಚರ್ಚೆ ನಡೆದಿದೆ. ನಾನು ಕೆಲವು ಪ್ರಮುಖರನ್ನು ಭೇಟಿ ಆಗುತ್ತಿದ್ದೇನೆ. ಎಲೆಕ್ಷನ್ ಘೋಷಣೆ ಆಗಲಿ. ಅಭ್ಯರ್ಥಿ ಘೋಷಣೆ ಆಗಲಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಹೆಸರು ನೀವು ಓಡಿಸ್ತಾ ಇದ್ದೀರಿ ಎಂದು ಮಾಧ್ಯಮದವರಿಗೆ ಹೇಳಿದರು.ಹೋರಾಟ ನಿಲ್ಲದು: ವಾಲ್ಮೀಕಿ ನಿಗಮದ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಾಲ್ಮೀಕಿ ನಿಗಮದಲ್ಲಿನ ಹಗರಣ ಈಗಾಗಲೇ ಒಂದು ಹಂತ ತಲುಪಿದೆ. ಎಸ್ಐಟಿಯಲ್ಲಿ ಮಂತ್ರಿಗಳು, ಅಧ್ಯಕ್ಷರ ಹೆಸರಿಲ್ಲದೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅವಾಗಲೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಆದರೆ, ಸಿಬಿಐ, ಇಡಿಯಲ್ಲಿ ತನಿಖೆ ಮಾಡುತ್ತಿರುವುದರಿಂದ ಅವರು ಚಾರ್ಜ್‌ಶೀಟ್ ಹಾಕಿದ್ದಾರೆ. ಅವರ ವಿರುದ್ದ ಕ್ರಮಕೈಗೊಳ್ಳುವುದು ಅನಿವಾರ್ಯ. ತಪ್ಪು ಆದಲ್ಲಿ ವಿರೋಧ ಪಕ್ಷವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಹಿಂದ ಸಂಘಟನೆಗಳಿಂದ ಬೆಂಗಳೂರು ಚಲೋ ನಡೆಸುವ ಕುರಿತು ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನಾನು ಏನು ಹೇಳಿಕೆ ನೀಡಲ್ಲ. ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ ಎಂದರು.