ಸರ್ಕಾರ ಪತನ ಬರೀ ಕನಸು: ಸಿದ್ದರಾಮಯ್ಯ ಗ್ಯಾರಂಟಿ

ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡಿ ಕಮಲ ಹಿಡಿದ ದೇವೇಗೌಡ ವಿರುದ್ಧ ಕಿಡಿ ಕಾರಿದ ಸಿಎಂ

KannadaprabhaNewsNetwork | Published : Apr 18, 2024 8:03 PM IST / Updated: Apr 19 2024, 07:18 AM IST

 ಚಿಕ್ಕಬಳ್ಳಾಪುರ/ಬಾಗೇಪಲ್ಲಿ :  ಲೋಕಸಭಾ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ ಆಗಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷರಾಮಯ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾತನಾಡಿ, ಲೋಕಸಭಾ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ ಆಗಲಿದೆ ಎಂದು ದೇವೇಗೌಡ ಹಾಗೂ ಬಿಜೆಪಿಯವರು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ 139 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ 66 ಹಾಗೂ ಜೆಡಿಎಸ್‌ 19 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ. ಆದರೂ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಹಿಂದೆ ದೇವೇಗೌಡರು ಕೋಮುವಾದಿಗಳ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಮುಂದಿನ ಜನ್ಮ ಇದ್ದರೆ ನಾನು ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈಗ ತಮ್ಮ ರಾಜಕೀಯ ಮತ್ತು ಜೆಡಿಎಸ್ ಪಕ್ಷದ ಉಳಿವಿಗಾಗಿ ಅದೇ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕೇವಲ 3 ಸ್ಥಾನಗಳನ್ನು ಪಡೆದು ಚುನಾವಣೆ ಎದುರಿಸುತ್ತಿದ್ದಾರೆ. 

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆದಿದ್ದರು. ಇದಕ್ಕೆ ದೇವೇಗೌಡರು ಕೆಂಡಾಮಂಡಲಾಗಿ ನಾವು ಬಿಜೆಪಿ ಬಿ ಟೀಂ ಅಲ್ಲ ಎಂದು ಹೇಳಿದ್ದರು. ಜತೆಗೆ, ರಾಹುಲ್ ಗಾಂಧಿ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ, ನಾವು ಎಂದಿಗೂ ಕೋಮುವಾದಿ ಪಕ್ಷದ ಜೊತೆ ಸೇರಲ್ಲ, ಮೋದಿ ಅವರೇನಾದರೂ 2ನೇ ಬಾರಿ ಪ್ರಧಾನಿಯಾದರೆ ನಾನು ಈ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರು. ಅಂದು ಹಾವು ಮುಂಗಿಸಿಯಂತಿದ್ದ ಜೆಡಿಎಸ್ ಮತ್ತು ಬಿಜೆಪಿ ಇಂದು ಬಾಯ್ ಬಾಯ್ ಎನ್ನುತ್ತಿವೆ. ಇದು ದೇವೇಗೌಡರ ಇಬ್ಬಂದಿತನ ತೋರಿಸುತ್ತೆ ಎಂದರು.

ಪ್ರಜಾಪ್ರಭುತ್ವ ಅಪಾಯದಲ್ಲಿ: ಸಂವಿಧಾನ ಬದಲಾವಣೆ ಮಾತು ಆಡುವವರ ಕೈಯಲ್ಲಿ ಅಧಿಕಾರ ಇರಬೇಕಾ ಎಂದು ಇದೇ ವೇಳೆ ಪ್ರಶ್ನಿಸಿರುವ ಸಿದ್ದರಾಮಯ್ಯ, ದೇಶದಲ್ಲೀಗ ಸಂವಿಧಾನ, ಪ್ರಜಾಪ್ರಭುತ್ವ ಎರಡೂ ಅಪಾಯದಲ್ಲಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ಕಾಂಗ್ರೆಸ್ ಯಾವತ್ತು ಜಾತಿ, ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದರು.

ಇದೇ ವೇಳೆ ಮೋದಿ ಅವರಿಗೆ ಚುನಾವಣೆ ಬಂದಾಗ ಮಾತ್ರ ಕರ್ನಾಟಕದ ನೆರಪಾಗುತ್ತದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ದೇಶದ ಜನರಿಗೆ ಭ್ರಮೆ ಹುಟ್ಟಿಸಿ ವಂಚಿಸುತ್ತಿರುವ ಮೋದಿ ಅವರನ್ನು ಈ ಚುನಾವಣೆಯಲ್ಲಿ ಜನ ತಿರಸ್ಕರಿಸಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

Share this article