ಸರ್ಕಾರ ಇರೋವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಆರ್‌.ವಿ. ದೇಶಪಾಂಡೆ

KannadaprabhaNewsNetwork | Published : Sep 11, 2024 1:09 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ. ಸಿಎಂ ಆಗಬೇಕೆಂದು ಬೆನ್ನು ಹತ್ತಿಲ್ಲ. ಸಿಎಂ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಸದ್ಯ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ನಮಗೆ ಇನ್ನೂ 4 ವರ್ಷ ಕಾಲಾವಕಾಶ ಇದೆ. ಹೀಗಿರುವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಸಿದ್ದರಾಮಯ್ಯ ಬದಲಾವಣೆ ಮಾಡುವ ಪರಿಸ್ಥಿತಿ ಕಾಣಿಸುತ್ತಿಲ್ಲ. ಈ ಕುರಿತು ಅನವಶ್ಯಕವಾಗಿ ಚರ್ಚೆ ಮಾಡಲಾಗುತ್ತಿದೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದ್ದು ಎಂದು ಮರುಪ್ರಶ್ನಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಮಲಾ ಹ್ಯಾರಿಸ್‌ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಈ ಕುರಿತು ಅವರೇ ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಸಹ ಕಳೆದ 6 ತಿಂಗಳಲ್ಲಿ ಎರಡು ಬಾರಿ ಮೋದಿಯವರನ್ನು ಭೇಟಿಯಾಗಿದ್ದಾರೆ. ರಾಜ್ಯಕ್ಕೆ ಬರಬೇಕಾದ ಅನುದಾನ ಕೇಳಿದ್ದಾರೆ. ಇದರಲ್ಲಿ ಬೇರೆ ಅರ್ಥ ಇಲ್ಲ ಎಂದು ಸಮುಜಾಯಿಸಿ ನೀಡಿದರು.ದೆಹಲಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ಪದೇ ಪದೇ ಭೇಟಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೆಹಲಿಗೆ ಏಕೆ ಹೋಗುತ್ತಾರೆ. ಅದು ನಮ್ಮ ಸೆಂಟರ್‌. ಅಲ್ಟಿಮೇಟ್‌ ಆಗುವುದು ಅಲ್ಲಿಯೇ. ಹಾಗಾಗಿ ದೆಹಲಿಗೆ ಹೋಗುತ್ತಾರೆ. ನಾನು ದೆಹಲಿಗೆ ಹೋಗುವುದಿಲ್ಲ ಎಂದ ಅವರು, ಕಾಂಗ್ರೆಸ್‌ನಲ್ಲಿ ಒಳಗೊಳಗೆ ನಾಯಕರು ಕತ್ತಿ ಮಸಿಯುತ್ತಿದ್ದಾರೆಂಬ ಜಗದೀಶ ಶೆಟ್ಟರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಶೆಟ್ಟರ್‌ ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಅ‍ವರು ಈ ರೀತಿ ಮಾತನಾಡುವವರಲ್ಲ ಎಂದಷ್ಟೇ ಹೇಳಿದರು.

ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ವ್ಯತಿರಿಕ್ತ ಪರಿಣಾಮ ಬರಲು ಸಾಧ್ಯವೇ ಇಲ್ಲ. ನಾನೂ ವಕೀಲನಿದ್ದೇನೆ. ಮುಡಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಸಿಎಂ ಪತ್ನಿ ತಪ್ಪು ಹೆಜ್ಜೆ ಇಟ್ಟಿಲ್ಲ. ಈ ಆರೋಪ ಸರಿಯಲ್ಲ ಎಂದು ಕೋರ್ಟ್ ಆದೇಶ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೀಪಾವಳಿ ಬಳಿಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ತೊಂದರೆ ಇದ್ದರೂ ₹57 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಖರ್ಚು ಮಾಡಿದ್ದೇವೆ. ಅದನ್ನು ತಿಳಿದುಕೊಳ್ಳುವ ಶಕ್ತಿ ಬಿಜೆಪಿಯವರಿಗೆ ಇರಬೇಕು. ಸಿಎಂ ಕುರ್ಚಿ ಖಾಲಿ ಇದ್ದರೆ ಕ್ಲೇಮ್‌ ಮಾಡಬೇಕು. ಕಾಂಗ್ರೆಸ್‌ನ ಕೆಲ ನಾಯಕರು ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ. ಸತೀಶ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಸಿಎಂ ಆಕಾಂಕ್ಷಿ ಅಲ್ಲ ಎಂದು. ಅವರು ಸಜ್ಜನ ರಾಜಕಾರಣಿ.

-ಆರ್.ವಿ.ದೇಶಪಾಂಡೆ, ಶಾಸಕ, ಮಾಜಿ ಸಚಿವ

Share this article