ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಜನ್ಮದಿನದ ಶುಭಾಶಯ ಕೋರಿದರು. ಇದೇ ವೇಳೆ ಕೆಲಕಾಲ ಇಬ್ಬರು ಮುಖಂಡರ ನಡುವೆ ರಾಜಕೀಯ ಕುರಿತು ಸಮಾಲೋಚನೆ ಕೂಡ ನಡೆಯಿತು. ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಪರಸ್ಪರ ಚರ್ಚೆ ನಡೆಯಿತು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಧಾರವಾಡ ಪ್ರವಾಸದಲ್ಲಿದ್ದೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದೆ. ಶೆಟ್ಟರ ಅವರು ಮನೆಗೆ ಉಪಾಹಾರಕ್ಕೆ ಕರೆದಿದ್ದರು. ಅದಕ್ಕೆ ಬಂದಿದ್ದೆ ಅಷ್ಟೇ. ಇದೇ ವೇಳೆ ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಸಿದೆ ಎಂದರು.
ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿದೆ. ಪ್ರತಿ ಜಿಲ್ಲೆಯಲ್ಲೂ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಭಿಪ್ರಾಯ ಸಂಗ್ರಹಿಸಿ ಮೂವರ ಹೆಸರುಗಳನ್ನು ಪ್ಯಾನೆಲ್ಗೆ ಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರು ಸೂಕ್ತ ಆಗುತ್ತಾರೋ ಅಂಥವರಿಗೆ ಟಿಕೆಟ್ ಕೊಡುತ್ತೇವೆ. ಶಾಸಕರು, ಕಾರ್ಯಕರ್ತರ ಅಭಿಪ್ರಾಯ ಕೇಳಿ ಫೈನಲ್ ಮಾಡುತ್ತೇವೆ ಎಂದು ನುಡಿದರು.ಧಾರವಾಡ ಲೋಕಸಭೆ ಚುನಾವಣೆಗೆ ಶೆಟ್ಟರ ಕೂಡ ಅಭ್ಯರ್ಥಿ ಎಂದು ತಿಳಿದುಕೊಂಡಿದ್ದೆವು ಎಂದರು. ಆದರೆ ಪಕ್ಕದಲ್ಲೇ ಇದ್ದ ಶೆಟ್ಟರ್ ಅವರು, ತಾವು ಆಕಾಂಕ್ಷಿ ಅಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿಗೆ ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಹರಡಿದೆ. ಇದನ್ನು ಜಗದೀಶ ಶೆಟ್ಟರ ಅಲ್ಲಗೆಳೆಯುತ್ತಿದ್ದಾರೆ. ಆದರೂ ಬಿಜೆಪಿಗರಿಂದ ಪದೇ ಪದೇ ಶೆಟ್ಟರ್ ಮರಳಿ ಬರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಶೆಟ್ಟರ ಮನೆಗೆ ಭೇಟಿ ನೀಡಿದ ವೇಳೆ ಈ ವಿಷಯ ಕೂಡ ಚರ್ಚೆಯಾಗಿದೆ ಎಂದು ಹೇಳಲಾಗಿದೆ.ಈ ವೇಳೆ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಸೇರಿದಂತೆ ಹಲವರಿದ್ದರು.
ಸನ್ಮಾನ ನಿರಾಕರಿಸಿದ ಸಿಎಂಈ ನಡುವೆ ಸಿದ್ದರಾಮಯ್ಯ ಅವರು ಶೆಟ್ಟರ ಮನೆಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರು ಘೋಷಣೆ ಕೂಗಲು ಶುರು ಮಾಡಿದರು. ಜತೆಗೆ ಶೆಟ್ಟರ ಅವರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು ಮುಂದಾದರು. ಆಗ ಸಿದ್ದರಾಮಯ್ಯ ಸನ್ಮಾನ ಎಲ್ಲ ಬೇಡ. ದೇಶದಲ್ಲಿ ಶೋಕಾಚರಣೆ ಇದೆ. ಈ ವೇಳೆ ಸನ್ಮಾನ ಮಾಡಿಸಿಕೊಳ್ಳುವುದು ಸರಿಯಲ್ಲ. ಘೋಷಣೆಗಳನ್ನು ಕೂಗಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದರು.