ಕನ್ನಡಪ್ರಭ ವಾರ್ತೆ ತುಮಕೂರು
ಆಧುನಿಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಯಾರೊಂದಿಗೂ ಹೋಲಿಕೆ ಮಾಡಲು ಆಗದು ಎನ್ನುವ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.ಅವರು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕುರುಬರ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು.
ಸಿದ್ದರಾಮಯ್ಯರನ್ನು ಹೋಲಿಕೆ ಮಾಡಲು ಯಾರೂ ಇಲ್ಲ ಎಂದ ಅವರು, 16 ಬಜೆಟ್ ಮಂಡಿಸಿರುವುದರ ಜೊತೆಗೆ ಅವರ ಸಾಧನೆ ತುಂಬಾ ಇದೆ, ಕುರುಬ ಸಮುದಾಯ ಹಾಗೂ ರಾಜ್ಯಕ್ಕೆ ಸಿದ್ದರಾಮಯ್ಯರ ಕೊಡುಗೆ ಅಪಾರ ಎಂದರು.2023ರ ಚುನಾವಣೆಯಲ್ಲಿ ಗ್ಯಾರಂಟಿ ಪ್ರಣಾಳಿಕೆ ಜವಾಬ್ದಾರಿಯನ್ನು ನನಗೆ ನೀಡಿದ್ದರು, ಬಡವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದ ಅವರು, ಕರ್ನಾಟಕದ ರಾಜಕಾರಣ ಹೊಸ ದಿಕ್ಕನ್ನು ಪಡೆದುಕೊಳ್ಳುತ್ತಿದ್ದು. ದೇಶಕ್ಕೆ ಒಂದು ಮಾದರಿ ತೀರ್ಮಾನ ಆಗಲಿದೆ ಎಂದು ಪರೋಕ್ಷವಾಗಿ ಜಾತಿಗಣತಿ ವಿಚಾರವನ್ನು ಪರಮೇಶ್ವರ್ ಪ್ರಸ್ತಾಪಿಸಿದರು.
ಒಂದು ಸಮುದಾಯವು ನಮ್ಮ ಇತಿಹಾಸ, ಸಂಸ್ಕೃತಿಯನ್ನು ಯಾರೋ ಬರೆಯುತ್ತಾರೆ ಅಂತ ಕಾದು ಕುಳಿತರೆ ಆಗುವುದಿಲ್ಲ. ಯಾರು ಬರೆಯುವುದಿಲ್ಲ. ನಮ್ಮ ಇತಿಹಾಸವನ್ನು ನಾವೇ ಬರೆದುಕೊಳ್ಳಬೇಕಿದೆ ಎಂದರು.ಯಾವ ಸಮುದಾಯದಲ್ಲೂ ಇದುವರೆಗೂ ಆಗಿಲ್ಲ ಅಂದರೆ ಅತಿಶೋಯಕ್ತಿ ಆಗುವುದಿಲ್ಲ. ಇಂದು 31 ಗ್ರಂಥಗಳನ್ನು ಸಿಎಂ ಲೋಕಾರ್ಪಣೆ ಮಾಡಿದ್ದಾರೆ. ಇಡೀ ಕುರುಬ ಸಮುದಾಯ ಇತಿಹಾಸದಿಂದ ಇಲ್ಲಿಯವರೆಗೆ ಬಂದಿದೆ ಅನ್ನೋದು ಪುಸ್ತಕದಲ್ಲಿ ಬರೆದಿರಬಹುದು. ಕುರುಬ ಸಮುದಾಯ ದೇಶದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಇದೆ. ಇದು ಸಾಮಾನ್ಯವಾದ ಸಮುದಾಯ ಅಲ್ಲ ಎಂದರು.
ಈ ಸಮುದಾಯದ ಕೊಡುಗೆ ರಾಜ್ಯಕ್ಕೆ ಅತಿ ದೊಡ್ಡದ್ದು ಎಂದ ಪರಮೇಶ್ವರ್, ದಾಸ ಸಾಹಿತ್ಯದಲ್ಲಿ ಕನಕದಾಸರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕುಲ ಕುಲವೆಂದು ಹೊಡೆದಾಡದಿರಿ ಅಂತಾ ಕನಕದಾಸರು ಹೇಳಿದ್ದಾರೆ, ಸಂಗೊಳ್ಳಿ ರಾಯಣ್ಣನಿಗಿಂತ ಸ್ವಾತಂತ್ರ್ಯ ಸೇನಾನಿ ಬೇಕಾ ಎಂದರು.