ಸಿದ್ದರಾಮೇಶ್ವರರು ನಿಜ ಅರ್ಥದಲ್ಲಿ ಕರ್ಮಯೋಗಿ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಲೋಕ ಕಲ್ಯಾಣಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟಿದ ಶ್ರೀಸಿದ್ದರಾಮೇಶ್ವರರು ನಿಜ ಅರ್ಥದಲ್ಲಿ ಕರ್ಮಯೋಗಿ, ಜ್ಞಾನಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಲೋಕ ಕಲ್ಯಾಣಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟಿದ ಶ್ರೀಸಿದ್ದರಾಮೇಶ್ವರರು ನಿಜ ಅರ್ಥದಲ್ಲಿ ಕರ್ಮಯೋಗಿ, ಜ್ಞಾನಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬೋವಿ ಸಮಾಜ, ರಾಷ್ಟ್ರೀಯ ಓಸಿಸಿಐ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ನಿಜ ಶರಣ ಶ್ರೀಸಿದ್ದರಾಮೇಶ್ವರರ 851ನೇ ಜಯಂತಿ ಕಾರ್ಯಕ್ರಮಕ್ಕೆ ಶ್ರೀಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ,

ನರ ಅವಶ್ಯಕತೆಗಳನ್ನು ತಿಳಿದು, ಸಕಲ ಜೀವರಾಶಿಗಳಿಗೂ ಅತಿ ಅಗತ್ಯವೆನಿಸುವ ಜೀವ ಜಲವನ್ನು ಸಂಗ್ರಹಿ ಸಲು, ಆ ಮೂಲಕ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಎಲ್ಲಾ ಕಾಯಕಗಳಿಗೆ ಬಳಕೆ ಮಾಡುವ ಉದ್ದೇಶದಿಂದ ನಾಡಿನಾದ್ಯಂತ ಸಾವಿರಾರು ಕೆರೆ ಕಟ್ಟೆಗಳನ್ನು ಕಟ್ಟಿದ ಮಹಾನ್ ಪುರುಷ ಶ್ರೀಸಿದ್ದರಾಮೇಶ್ವರರ ಜಯಂತಿಯನ್ನು ಸರಕಾರವೇ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ವೈಜ್ಞಾನಿಕತೆಗೆ ಮನುಷ್ಯ ತೆರೆದುಕೊಳ್ಳುವ ಮೊದಲೇ ಶ್ರೀಶಿವಯೋಗಿ ಸಿದ್ದರಾಮೇಶ್ವರರ ನಿರ್ಮಿಸಿದ ಅನೇಕ ಕೆರೆ ಕಟ್ಟೆಗಳು ಇಂದಿನ ತಂತ್ರಜ್ಞಾನಕ್ಕೆ ಸವಾಲಾಗಿ ನಿಂತಿವೆ. ಸರ್ವರಿಗೂ ಸಮಪಾಲು ಎಂಬಂತೆ ತಾವು ಕಟ್ಟಿದ ಕೆರೆ ಕಟ್ಟೆಗಳಲ್ಲಿ ಎಲ್ಲ ವರ್ಗದವರು ನೀರನ್ನು ಸಮಪಾಲು ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಾನವ ಕಲ್ಯಾಣ ಮತ್ತು ಅಭಿವೃದ್ಧಿ ಅವರ ಮೂಲ ಉದ್ದೇಶವಾಗಿತ್ತು. ಅಲ್ಲಮ ಪ್ರಭು, ಚನ್ನ ಬಸವಣ್ಣನ ನಂತರ ಶೂನ್ಯ ಸಿಂಹಾಸನ ಏರಿದ ಸೊನ್ನಲಿಗೆ ಸಿದ್ದರಾಮೇಶ್ವರರು, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕಾಯಕ ಯೋಗಿಗಳ ಪ್ರತಿನಿಧಿ ಯಾಗಿ ಕಲ್ಯಾಣದ ಕ್ರಾಂತಿಯಲ್ಲಿ ಕಾಣುತ್ತಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಬೋವಿ ಸಮಾಜದ ಮುಖಂಡ ಊರುಕೆರೆ ಉಮೇಶ್ ಮಾತನಾಡಿ, ಕಾಯಕವನ್ನೇ ಧರ್ಮವೆಂದು ನಂಬಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರರ ನಮ್ಮ ಬೋವಿ ಸಮಾಜದ ಕುಲಗುರುಗಳು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿ ಎಂಬಂತೆ, ಅವರು ಹಾಕಿಕೊಟ್ಟ ದಾರಿಯಲ್ಲಿ ಕಾಯಕವನ್ನೇ ದೇವರೆಂದು ನಂಬುವ ನಾವುಗಳೆಲ್ಲರೂ ಮುನ್ನೆಡೆಯಬೇಕಿದೆ ಎಂದರು.

ಬೋವಿ ಸಮುದಾಯದ ಮುಖಂಡ ಕಾಶಿ ಮಾತನಾಡಿ, ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತನಾಗಿ, ಸಾಮಾನ್ಯ ಕುಟುಂಬ ದಲ್ಲಿ ಹುಟ್ಟಿ, ಅತ್ಯಂತ ಎತ್ತರದ ಶೂನ್ಯ ಸಿಂಹಾಸನದ ಅಧ್ಯಕ್ಷರಾದ ಶ್ರೀಸೊನ್ನಲಗಿ ಸಿದ್ದರಾಮೇಶ್ವರರು, 12ನೇ ಶತಮಾನದ ಶರಣ ಚಳುವಳಿಯ ಪ್ರಮುಖರು. ಇಂತಹವರು ನಮ್ಮ ಕುಲಗುರುಗಳು ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, 12ನೇ ಶತಮಾನದಲ್ಲಿ ಜಾತಿಯ ತಾರತಮ್ಯ ವನ್ನು ಕುರಿತ ಶ್ರೀಶಿವಯೋಗಿ ಸಿದ್ದರಾಮೇಶ್ವರರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜ ಪರಿವರ್ತನೆಗಾಗಿ ಹಗಲಿರುಳಲು ಶ್ರಮಿಸಿದ ಇವರು, ಎಲ್ಲಾ ಸಮಾಜಗಳ ಒಳಿತಿಗಾಗಿ ದುಡಿದವರು. ಅವರ ತತ್ವ ಸಿದ್ಧಾಂತಗಳನ್ನು ಈಗಿನ ಯುವಜನತೆ ಮೈಗೂಡಿಸಿಕೊಂಡು ಕಾರ್ಯಪ್ರವೃತ್ತರಾದರೆ ಜಯಂತಿಗೆ ಅರ್ಥಪೂರ್ಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕರಾದ ಸುರೇಶಕುಮಾರ್,ಬೋವಿ ಸಮಾಜದ ಅಧ್ಯಕ್ಷರಾದ ಹೆಚ್.ಉಮೇಶ್, ಮಹಾನಗರಪಾಲಿಕೆ ಸದಸ್ಯರಾದ ಎಸ್.ಮಂಜುನಾಥ್, ಮಾಜಿ ಸದಸ್ಯ ವಿಶ್ವನಾಥ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಂಜುನಾಥ್ ಓಸಿಸಿಐ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಬೋವಿ ಸಮಾಜದ ಮುಖ್ಯಸ್ಥ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ವೆಂಕಟಸ್ವಾಮಿ, ಖಜಾಂಚಿ ಗಿರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Share this article