ಕೊಪ್ಪಳ: ಶಿವಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದ ಪ್ರಸಿದ್ಧ ಸಮಾಜ ಸೇವಕರಾಗಿದ್ದರು ಎಂದು ಗಜೇಂದ್ರಗಡ ಎಸ್.ಎಸ್. ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅರವಿಂದ ಎಸ್. ವಡ್ಡರ ಹೇಳಿದರು.
ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವ ಜತೆಗೆ ಸಮಾಜಮುಖಿ ಕಾಯಕ ಮಾಡುವ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮೇಶ್ವರರು. ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ತಿಳಿಸಬೇಕು ಎಂದು ಹೇಳಿದರು.
ಭೋವಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಪೂಜಾರ, ರಮೇಶ ಬಸಾಪಟ್ಟಣ, ರಾಮಣ್ಣ ಅಳವಂಡಿ, ಉಚ್ಚಪ್ಪ ಭೋವಿ, ಎಕಪ್ಪ ರ‍್ಯಾವಣಕಿ, ಲಕ್ಷ್ಮಣ ಪೂಜಾರ, ಹೊನ್ನಪ್ಪ ಭೋವಿ, ದುರ್ಗಪ್ಪ ಮ್ಯಾಗೇರಿ, ರಾಮು ಹಾಗೂ ಹಲವು ಮುಖಂಡರು, ಇತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.ಭಾವಚಿತ್ರಕ್ಕೆ ಪುಷ್ಪಾರ್ಚನೆ: ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಶಿವಯೋಗಿ ಸಿದ್ರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಮರ್ಪಿಸಿದರು.
ಅದ್ಧೂರಿ ಮೆರವಣಿಗೆ: ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಸಿದ್ರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಚಾಲನೆ ನೀಡಿದರು. ಇದೇ ವೇಳೆ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ ಚೌಗಲಾ ಇದ್ದರು.
ಮೆರವಣಿಗೆಯು ಶ್ರೀ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದ ವರೆಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ತಲೆಯ ಮೇಲೆ ಕುಂಭ ಹೊತ್ತು ಸಾಗಿದರು. ಭೋವಿ ಸಮಾಜದವರು ಹಾಗೂ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.