ರಾಜಕೀಯವಾಗಿ ನನ್ನ ಮುಗಿಸಲು ಸಿದ್ದೇಶ್ವರ ಯತ್ನ

KannadaprabhaNewsNetwork |  
Published : Oct 19, 2023, 12:46 AM IST
18ಕೆಡಿವಿಜಿ5, 6-ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ರವೀಂದ್ರನಾಥ, ಮಾಡಾಳು, ಗುರುಸಿದ್ದನಗೌಡ ಆಯ್ತು, ಈಗ ನಾನೇ ಟಾರ್ಗೆಟ್‌: ಮಾಜಿ ಸಚಿವ ರೇಣುಕಾಚಾರ್ಯ ಗಂಭೀರ ಆರೋಪ

* ರವೀಂದ್ರನಾಥ, ಮಾಡಾಳು, ಗುರುಸಿದ್ದನಗೌಡ ಆಯ್ತು, ಈಗ ನಾನೇ ಟಾರ್ಗೆಟ್‌: ಮಾಜಿ ಸಚಿವ ರೇಣುಕಾಚಾರ್ಯ ಗಂಭೀರ ಆರೋಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರಗಿಂತ ನಾನು ಸೀನಿಯರ್‌. ವಯಸ್ಸಿನಲ್ಲಿ ಹಿರಿಯರಾದ ಸಿದ್ದೇಶ್ವರರ ಬಗ್ಗೆ ನನಗೆ ಗೌರವವಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನೂ ಆಕಾಂಕ್ಷಿ ಅಂದ ದಿನದಿಂದಲೂ ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಗೆ ಪಕ್ಷದಿಂದ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಅಭ್ಯರ್ಥಿ ಯಾರೆಂಬುದೂ ಘೋಷಣೆಯಾಗಿಲ್ಲ. ನಾನೂ ಓರ್ವ ಆಕಾಂಕ್ಷಿ ಅಂದಾಗಿನಿಂದಲೂ ನನ್ನನ್ನು ರಾಜಕೀಯವಾಗಿ ಮುಗಿಸಲು ಸಿದ್ದೇಶ್ವರ ಪ್ರಯತ್ನಿಸುತ್ತಿದ್ದಾರೆ ಎಂದರು.

ಸಿದ್ದೇಶ್ವರರ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ 3 ಚುನಾವಣೆ, ಸ್ವತಃ ಸಿದ್ದೇಶ್ವರರ 4 ಲೋಕಸಭೆ ಚುನಾವಣೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಆದರೆ, ಬಹಳಷ್ಟು ಜನರನ್ನು ಮೂಲೆಗುಂಪು ಮಾಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ವಿನಾಕಾರಣ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಸರ್ವಾಧಿಕಾರಿ ಧೋರಣೆಗೆ ಖಂಡನೆ:

ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌, ನಂತರ ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಮಾಜಿ ಶಾಸಕ ಟಿ.ಗುರುಸಿದ್ದನಗೌಡರ ಸೇರಿ ಎಲ್ಲರನ್ನೂ ರಾಜಕೀಯವಾಗಿ ಮುಗಿಸುವ ಕೆಲಸವನ್ನು ಸಿದ್ದೇಶ್ವರ ಮಾಡಿದ್ದಾರೆ. ಪಕ್ಷದಲ್ಲಿ ಇಂತಹ ಸರ್ವಾಧಿಕಾರಿ ಧೋರಣೆಯನ್ನು ನಾನು ಖಂಡಿಸಿದ್ದೇನೆ. ಇದಕ್ಕಾಗಿ ವ್ಯವಸ್ಥಿತವಾಗಿ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು. ದಾವಣಗೆರೆ ಲೋಕಸಭೆ ಚುನಾವಣೆಗೆ ನಾನು ಆಕಾಂಕ್ಷಿ ಅಂದ ದಿನದಿಂದಲೂ ನನ್ನನ್ನೇ ಗುರಿಯಾಗಿಸಿ, ಅಪಪ್ರಚಾರ ಮಾಡಲಾಗುತ್ತಿದೆ. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ರಯತ್ನ ನಡೆಸಿದ್ದಾರೆ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ಸಮರ್ಥ ನಾಯಕತ್ವವಿಲ್ಲದೇ ಬಿಜೆಪಿ ತೊರೆಯುತ್ತಾರೆ: ರೇಣುಕಾಚಾರ್ಯ

ನಾನಂತೂ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ ದಾವಣಗೆರೆ: ಬಿಜೆಪಿಯಲ್ಲಿ ಈಗ ಸಮರ್ಥ ನಾಯಕತ್ವ ಇಲ್ಲದ್ದಕ್ಕೆ ತುಂಬಾ ಜನ ನನಗೆ ಕರೆ ಮಾಡಿ, ಪಕ್ಷ ಬಿಡುವ ಬಗ್ಗೆ ಮಾತನಾಡುತ್ತಿದ್ದಾರೆ. ಸಾಕಷ್ಟು ಜನ ಪಕ್ಷವನ್ನೂ ಬಿಡಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಂಬಾ ಜನರು ಪಕ್ಷ ತೊರೆಯಲಿದ್ದಾರೆ. ಪಕ್ಷದಲ್ಲಿ ಸಮರ್ಥ ನಾಯಕತ್ವ ಇಲ್ಲದಿರುವುದೇ ಇದಕ್ಕೆ ಕಾರಣ‍. ನಮ್ಮವರಿಗೇ ನಾನು ಬೇಡ ಎನಿಸುತ್ತಿರಬೇಕು ಎಂದು ಮಾರ್ಮಿಕವಾಗಿ ಹೇಳಿದರು. ನಾನಂತೂ ಎಲ್ಲಿಯೂ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರುತ್ತೇನೆಂಬುದಾಗಿ ಹೇಳಿಲ್ಲ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ತೀವ್ರ ಮಳೆಯ ಕೊರತೆಯಾಗಿದ್ದು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ನಮ್ಮೆರೆಡೂ ತಾಲೂಕುಗಳಬರಗಾಲ ಪಟ್ಟಿಗೆ ಸೇರ್ಪಡೆ ಮಾಡಲು, ಬಾಕಿ ಇದ್ದ ಅನುದಾನ ಬಿಡುಗಡೆ ಮಾಡುವಂತೆ ಕಾಂಗ್ರೆಸ್ಸಿನ ನಾಯಕರನ್ನು ಭೇಟಿ ಮಾಡಿದ್ದೆ ಎಂದು ತಿಳಿಸಿದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಗುರಿ ನಮ್ಮದು. ಕ್ಷೇತ್ರಾದ್ಯಂತ ಈಗಾಗಲೇ ನರೇಂದ್ರ ಮೋದಿ ಪರ ಕರ ಪತ್ರ ಹಂಚಿದ್ದೇವೆ. ಆದರೆ, ಪಕ್ಷದ ರಾಜ್ಯ ನಾಯಕರ ಮೇಲೆ ನಮಗೆ ನೋವಾಗಿದೆ. ಹಿಂದೆ ನಮ್ಮ ಸರ್ಕಾರದಲ್ಲಿ 6 ಸಚಿವ ಸ್ಥಾನಗಳು ಖಾಲಿ ಇದ್ದರೂ ದಾವಣಗೆರೆಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡಲಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರ ಏಕಕಾಲಕ್ಕೆ ಎಲ್ಲರನ್ನೂ ಮಂತ್ರಿ ಮಾಡಿದರು ಎಂದು ಹೇಳಿದರು. ಸಚಿವ ಸ್ಥಾನ ಕೊಡದ್ದಕ್ಕೆ ಆಕ್ರೋಶ: ರಾಜು ಗೌಡಗೆ, ನನಗೂ ನಮ್ಮ ಸರ್ಕಾರದಲ್ಲಿ ಅನ್ಯಾಯ ಮಾಡಿದರು. ಜಿಲ್ಲೆಯಲ್ಲಿ ಹಿರಿಯ ಅನುಭವಿ ನಾಯಕ ಎಸ್.ಎ.ರವೀಂದ್ರನಾಥ್‌ರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಐದಾರು ಸಚಿವ ಸ್ಥಾನ ಖಾಲಿ ಉಳಿದಿದ್ದರೂ ನಮಗೆ ಯಾರಿಗೂ ನೀಡಲಿಲ್ಲ ಎಂದು ರೇಣುಕಾಚಾರ್ಯ ತಮ್ಮ ಆಕ್ರೋಶ ಹೊರ ಹಾಕಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ