ಚುನಾವಣೆ ಸೋತ ಸಿದ್ದೇಶ್ವರ್‌ಗೆ ಆತಂಕ ಬೇಡ: ರವೀಂದ್ರನಾಥ್‌ ಸಲಹೆ

KannadaprabhaNewsNetwork | Published : Jun 18, 2024 12:46 AM

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮಾಜಿ ಸಂಸದರು ಯಾವುದಾದರೂ ದೊಡ್ಡ ಆಲದ ಮರದ ಕೆಳಗೆ ಕುಳಿತು, ಜ್ಞಾನೋದಯ ಮಾಡಿಕೊಂಡು ಬರಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು ಜಿ.ಎಂ.ಸಿದ್ದೇಶ್ವರ್‌ಗೆ ಸಲಹೆ ನೀಡಿದ್ದಾರೆ.

- ನಾನೂ 5 ಸಲ ಸೋತು, 5 ಸಲ ಗೆದ್ದಿದ್ದೇನೆ

- ಸೋಲನ್ನು ಹೊಸ ಅಧ್ಯಾಯ ಎಂದು ತಿಳಿಯಬೇಕು

- ಆಲದ ಮರ ಕೆಳಗಡೆ ಕುಳಿತು ಜ್ಞಾನೋದಯ ಬಳಿಕ ಬರಲು ಸಲಹೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆಲೋಕಸಭೆ ಚುನಾವಣೆಯಲ್ಲಿ ಸೋತಿದ್ದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮಾಜಿ ಸಂಸದರು ಯಾವುದಾದರೂ ದೊಡ್ಡ ಆಲದ ಮರದ ಕೆಳಗೆ ಕುಳಿತು, ಜ್ಞಾನೋದಯ ಮಾಡಿಕೊಂಡು ಬರಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು ಜಿ.ಎಂ.ಸಿದ್ದೇಶ್ವರ್‌ಗೆ ಸಲಹೆ ನೀಡಿದ್ದಾರೆ.ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರ ಜೊತೆಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜಕಾರಣವನ್ನು ಎಂದಿಗೂ ದ್ವೇಷದಿಂದ ಮಾಡಿಕೊಂಡು ಬಂದಿಲ್ಲ ಎಂದು ತಿರುಗೇಟು ನೀಡಿದರು.ನಾವು ಕಾಂಗ್ರೆಸ್ಸಿನವರಿಗೆ ಬುಕ್ ಆಗಿದ್ದೇವೆ ಎನ್ನುವುದು ತಪ್ಪು. ನಾನು ಎಲ್ಲಿಗೆ ಹೋದರೂ ಬುಕ್ ಆಗಿದ್ದೇವೆಂದು ಹೇಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ ನಮ್ಮ ಊರಿಗೆ ಪ್ರಚಾರಕ್ಕೆ ಬಂದಿದ್ದರು. ಮತ ಕೇಳಿಕೊಂಡು ಎಲ್ಲರ ಮನೆಗೆ ಹೋದಂತೆಯೇ, ನಮ್ಮ ಮನೆಗೂ ಬಂದಿದ್ದರು. ಹಾಗೆ ಬಂದಿದ್ದಕ್ಕೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರೆ ಏನರ್ಥ? ಓಟು ಕೇಳಿಕೊಂಡು ಮನೆಗೆ ಬಂದಾಕ್ಷಣ ನಾವು ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಅವರಿಗೆ ಮತ ಹಾಕಿದ್ದೇವೆ ಅಂತಾ ಅರ್ಥನಾ ಎಂದು ಪ್ರಶ್ನಿಸಿದರು.ನಾನು ಸಹ ಐದು ಸಲ ಸೋತು, ಐದು ಸಲ ಗೆದ್ದಿದ್ದೇನೆ. ಸೋತಾಗ ಸಿಕ್ಕಸಿಕ್ಕವರ ಮೇಲೆ ಆರೋಪ ಮಾಡುತ್ತಾ ಸುತ್ತಾಡಲಿಲ್ಲ. ಯಾರಿಗೂ ನೋವುಂಟು ಮಾಡುವಂತೆ ಮಾತನಾಡಿಲ್ಲ. ಜಿ.ಎಂ.ಸಿದ್ದೇಶ್ವರ 4 ಸಲ ಲೋಕಸಭೆ ಚುನಾವಣೆ ಗೆದ್ದಿದ್ದಾರೆ. ಒಂದು ಸಲ ಸೋತ ಮಾತ್ರಕ್ಕೆ ಆತಂಕಪಡಬೇಕಿಲ್ಲ. ಮೊನ್ನೆಯ ಸೋಲು ಹೊಸ ಅಧ್ಯಾಯವೆಂದು ಮಾಜಿ ಸಂಸದರು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.ಹಿಂದೆಲ್ಲಾ ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಹೋದಾಗ ಕಲ್ಲು, ಕಣಗ ತೆಗೆದುಕೊಂಡು ಜನರು ಹೊಡೆಯಲು ಬೆನ್ನು ಹತ್ತುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲ. ಅಂತಹ ಪರಿಸ್ಥಿತಿ ನಮಗೆ ಬರಬಾರದು. ನೀವು ಈಗ ಸೋತಿದ್ದೀರಿ. ಮತ್ತೆ ಕಾರ್ಯಕರ್ತರ ಬಳಿ ಹೋಗಿ, ನಿಮ್ಮನ್ನು ಅಲ್ಲದಿದ್ದರೂ, ನಿಮ್ಮ ಮಕ್ಕಳನ್ನಾದರೂ ಜನರು ಗೆಲ್ಲಿಸುತ್ತಾರೆ. ಸ್ವಲ್ಪ ದಿನಗಳ ಕಾಲ ಶಾಂತವಾಗಿರಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ರವೀಂದ್ರನಾಥ ಹೇಳಿದರು.- - -ಕೋಟ್‌ಹೊಸದುರ್ಗ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಅಲ್ಲಿನ ಒಬ್ಬ ಸಾಮಾನ್ಯ ಸೊಸೈಟಿ ಅಧ್ಯಕ್ಷ ಸೋಲಿಸಿದ್ದ. ಹರಿಹರದ ಹಿರಿಯ ರಾಜಕಾರಣಿ ಸಿದ್ದವೀರಪ್ಪನವರನ್ನು ಅದೇ ತಾನೇ ವಕೀಲಿ ವೃತ್ತಿಗೆ ಕಾಲಿಟ್ಟಿದ್ದ ಯುವಕ ಸೋಲಿಸಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಸೋಲು, ಗೆಲುವು ಮಾಮೂಲು. ಅದನ್ನೆಲ್ಲಾ ಸಮಾನವಾಗಿ ಸ್ವೀಕರಿಸಬೇಕು- ಎಸ್.ಎ.ರವೀಂದ್ರನಾಥ, ಮಾಜಿ ಸಚಿವ- - --17ಕೆಡಿವಿಜಿ12: ಎಸ್.ಎ.ರವೀಂದ್ರನಾಥ, ಮಾಜಿ ಸಚಿವ, ಬಿಜೆಪಿ ಮುಖಂಡ

Share this article