ಭಿಕ್ಷಾಟನೆ ಮಾಡಿ ಮಠ ಕಟ್ಟಿದ್ದ ಸಿದ್ದ ಯೋಗಾನಂದ ಶ್ರೀ

KannadaprabhaNewsNetwork | Published : Aug 19, 2024 12:45 AM

ಸಾರಾಂಶ

ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರವನ್ನು ಲಿಂಗೈಕ್ಯ ಕಾಯಕಯೋಗಿ ಶ್ರೀ ಸಿದ್ದಯೋಗಾನಂದ ಶ್ರೀಗಳು ಭಿಕ್ಷಾಟನೆ ಮಾಡಿ ಕಟ್ಟಿದರು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಶ್ರೀ ವನಕಲ್ಲು ಮಲ್ಲೇಶ್ವರ ಕ್ಷೇತ್ರವನ್ನು ಲಿಂಗೈಕ್ಯ ಕಾಯಕಯೋಗಿ ಶ್ರೀ ಸಿದ್ದಯೋಗಾನಂದ ಶ್ರೀಗಳು ಭಿಕ್ಷಾಟನೆ ಮಾಡಿ ಕಟ್ಟಿದರು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನರಸೀಪುರದ ಶ್ರೀ ವನಕಲ್ಲು ಮಲ್ಲೇಶ್ವರ ಮಠದಲ್ಲಿ ಶ್ರೀ ಸಿದ್ದಯೋಗಾನಂದ ಶ್ರೀಗಳ 14ನೇ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವನಕಲ್ಲು ಮಠಕ್ಕೆ ದೊಡ್ಡ ಮಟ್ಟದಲ್ಲಿ ಆಸ್ತಿ ಇಲ್ಲದಿದ್ದರೂ ಅನಾಥ ಮಕ್ಕಳು, ವಯೋವೃದ್ಧರು ಹಾಗೂ 80ಕ್ಕೂ ಹೆಚ್ಚು ಗೋವುಗಳನ್ನು ಸಾಕುತ್ತಿರುವುದು ಕಷ್ಟದ ಕೆಲಸ. ಸಿದ್ದಯೋಗಾನಂದ ಶ್ರೀಗಳು ಅನಾಥ ಆಶ್ರಮವನ್ನು ಪ್ರಾರಂಭಿಸಿ, ಛತ್ರಗಳಲ್ಲಿ ಜೋಳಿಗೆಯಲ್ಲಿ ಅನ್ನ, ವಾಟರ್ ಕ್ಯಾನಿನಲ್ಲಿ ಸಾಂಬಾರು ತಂದು ಅನಾಥ ಮಕ್ಕಳನ್ನು ಪೋಷಿಸಿದ್ದಾರೆ. ಪೂಜ್ಯರು ಕಾಯಕದಿಂದಲೇ ಮಠ ನಿರ್ಮಿಸಿದ್ದಾರೆ ಎಂದು ಹೇಳಿದರು.

ಶ್ರೀ ಮಠಕ್ಕೆ ಮೂಲ ಸಂಪ್ರದಾಯದ ಭಕ್ತರಿಲ್ಲದಿದ್ದರೂ, ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೆ ಸರ್ವ ಸಮುದಾಯವನ್ನು ಸೇರಿಸಿಕೊಂಡು ಮಠವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಹಿರಿಯ ಶ್ರೀಗಳ ಸಾಧನೆ ಸಾರ್ಥಕವೆನಿಸುತ್ತಿದೆ. ಹಿರಿಯ ಶ್ರೀಗಳ ಅಣತಿಯಂತೆ, ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ಎಲ್ಲಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ವನಕಲ್ಲು ಮಠದ ಡಾ.ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಸಿದ್ದಯೋಗಾನಂದ ಶ್ರೀಗಳ ಬದುಕು ನಮಗೆ ಆದರ್ಶವಾಗಿದೆ. ಈ ಮಠವನ್ನು ಕಟ್ಟಲು ಪೂಜ್ಯರು ಪಟ್ಟ ಶ್ರಮ ಬಹಳಷ್ಟಿದೆ. ಶ್ರೀ ಕ್ಷೇತ್ರ, ಪೂಜ್ಯರ ಸಂಕಲ್ಪದಂತೆ ಮುಂದಿನ ದಿನಗಳಲ್ಲಿ ಆಯುರ್ವೇದಕ್ಕೆ ಸಂಬಂಧಪಟ್ಟ ಆಸ್ಪತ್ರೆಗಳನ್ನು ತೆರೆಯಲು ಪ್ರಯತ್ನಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯಾಧ್ಯಕ್ಷ ಹೊಸಮನೆ ಚೆನ್ನಪ್ಪ, ಕಾರ್ಯದರ್ಶಿ ಗಂಗಯ್ಯ, ರಾಮಕೃಷ್ಣಯ್ಯ, ಗ್ರಾಪಂ ಅಧ್ಯಕ್ಷ ರಾಮಾಂಜಿನಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಸಾಹಿತಿ ಬಿದಲೂರು ಸೋಮಣ್ಣ ಇತರರಿದ್ದರು.

Share this article