ಕನ್ನಡಪ್ರಭ ವಾರ್ತೆ ನರಗುಂದ
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಶ್ರೀ ದೊರೆಸ್ವಾಮಿ ವಿರಕ್ತಮಠ ಹಾಗೂ ಶ್ರೀ ಮಾದಾರ ಚನ್ನಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ತಾಲೂಕಿನ ಶಿರೋಳ ಗ್ರಾಮದ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಸಮುದಾಯ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕನ್ನಡಿಗರು ಉಪನ್ಯಾಸ ಸರಣಿ-2026 ಸಮಾರಂಭದಲ್ಲಿ ಕನ್ನಡ ಕಟ್ಟುವಲ್ಲಿ ಮಠಮಾನ್ಯಗಳ ಪಾತ್ರ ವಿಷಯದ ಕುರಿತು ಮಾತನಾಡಿದರು.
ಗಡಿನಾಡಿನ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗದುಗಿನ ಸಿದ್ದಲಿಂಗ ಶ್ರೀಗಳು ಹಾಗೂ ಪೂಜ್ಯ ಗುರುಬಸವ ಶ್ರೀಗಳ ಸೇವೆ ಅನನ್ಯವಾದುದು ಎಂದರು.ಕನ್ನಡದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಅಪಾರ ಕಾಳಜಿ ಹೊಂದಿದ್ದ ಈರ್ವರು ಶ್ರೀಗಳು ಕನ್ನಡಪರ ಚಳವಳಿಗಳಿಗೆ ನೈತಿಕ ಬಲ ತುಂಬಿದ ಮಹಾನ್ ಚೇತನರಾಗಿದ್ದರು. ಮಠಗಳು ಕೇವಲ ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿರದೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಈ ಇಬ್ಬರು ಪೂಜ್ಯರ ಕನ್ನಡಪರ ಕಾಳಜಿ ಮತ್ತು ಕಾರ್ಯಗಳು ಜೀವಂತ ನಿದರ್ಶನವಾಗಿವೆ. ಕನ್ನಡ ನಾಡು-ನುಡಿಯ ಸೇವೆಯೇ ನಾಡಿನ ಸೇವೆ ಎಂಬ ಆಶಯದೊಂದಿಗೆ ಇಂತಹ ಮಹನೀಯರ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗಡಿ ನಾಡಿನ ಪರಿಸರದಲ್ಲಿ ಕನ್ನಡ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪೂಜ್ಯ ಗುರುಬಸವ ಶ್ರೀಗಳು ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕನ್ನಡ ಶಾಲೆಗಳ ಪ್ರೋತ್ಸಾಹ, ಕನ್ನಡಪರ ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುವ ಮೂಲಕ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿ ಗಡಿನಾಡಿನಲ್ಲಿ ಕನ್ನಡದ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಕಿರಿಯ ತರಬೇತಿ ಅಧಿಕಾರಿ ಎಸ್.ವಿ. ಕುಪಸ್ತ ಕಾರ್ಯಕ್ರಮ ನಿರೂಪಿಸಿದರು.