ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಸಾಹಿತ್ಯ ಪರಿಷತ್ , ತುಮಕೂರು ಜಿಲ್ಲಾ ಭೋವಿ ಸಮಾಜ, ಭಾರತೀಯ ವಡ್ಡರ ಸಂಘದ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದು ಗ್ರಾಮದ ಅಭಿವೃದ್ಧಿಗೆ ಬೇಕಾದ ಕೆರೆ, ಕಟ್ಟೆ, ದೇವಾಲಯ, ಮನೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತವರು ಸಿದ್ಧರಾಮರು, ಸೊನ್ನಲಿಗಿಯಲ್ಲಿ ಹುಟ್ಟಿದ ಸಿದ್ಧರಾಮೇಶ್ವರರು ಮಹಾರಾಷ್ಟ್ರ, ಶ್ರೀ ಶೈಲ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಚರಿಸಿ, ಹಲವಾರು ಜನೋಪಯೋಗಿ ಕಾರ್ಯ ಮಾಡಿದವರು. ಅವರು ನಿರ್ಮಿಸಿದ ದೇವಾಲಯಗಳು ಧಾರ್ಮಿಕ ಕಾರ್ಯಗಳಿಗೆ ಸಿಮೀತವಾಗದೆ, ಅಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿತ್ತು, ಅನಾಥರಿಗೆ, ನಿರ್ಗತಿಕರಿಗೆ, ಪ್ರವಾಸಿಗರಿಗೆ ಆಶ್ರಯ ತಾಣವಾಗಿ ದೇವಾಲಯಗಳು ಬಳಕೆಯಾಗುತ್ತಿದ್ದವು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಇಂದು ಲೋಕೋಪಯೋಗಿ ಇಲಾಖೆ ಮಾಡುತ್ತಿರುವ ಕೆಲಸವನ್ನು ಅಂದೇ ಸಿದ್ಧರಾಮೇಶ್ವರರು ಮಾಡಿದ್ದರು ಎಂದು ನುಡಿದರು.ಲೋಕೋಪಯೋಗಿ ಕೆಲಸಗಳಲ್ಲಿ ತೊಡಗಿದ್ದ ಶಿವಯೋಗಿ ಸಿದ್ಧರಾಮೇಶ್ವರರು, ಅಲ್ಲಮ ಪ್ರಭುಗಳ ಭೇಟಿಯ ನಂತರ , ಅವರ ಅಣತಿಯಂತೆ ಲೋಕೋಪಯೋಗಿ ಕೆಲಸಗಳ ಜೊತೆಗೆ ಆಧ್ಯಾತ್ಮದ ಕಡೆಗೂ ತಮ್ಮನ್ನು ತೊಡಗಿಸಿಕೊಂಡರು. ಎರಡರಲ್ಲಿಯೂ ಸಿದ್ಧಿ ಪಡೆದು ಪವಾಡ ಪುರುಷರಾದರು. ಇಂದು ನಾವೂ ಕೂಡ ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಜನಜೀವನ ಹಸನುಗೊಳಿಸುವುದೇ ಸಿದ್ಧರಾಮೇಶ್ವರರಿಗೆ ನೀಡುವ ಗೌರವವಾಗಿದೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಹೆಸರಿನಲ್ಲಿ ಅವರ ಅನೇಕ ವಚನಗಳು ನಮಗೆ ದೊರೆತಿವೆ. ಅವರು ನಡೆದ ದಾರಿಯಲ್ಲಿ, ಅವರ ಆಶಯಗಳ ಹೊತ್ತು ನಡೆಯುವುದೇ ನಿಜವಾದ ಸಿದ್ಧರಾಮರ ಜಯಂತಿಯಾಗಿದೆ ಎಂದರು.
ಭಾರತೀಯ ವಡ್ಡರ ಸಂಘನ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ಭೋವಿ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿ ಇದೆ. ಜಿಲ್ಲಾಡಳಿತ ಮಹನೀಯರ ಜಯಂತಿ ವೇಳೆ ಕನಿಷ್ಠ 15 ದಿನ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆದು ಮಾತನಾಡಿ, ಅದ್ಧೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ಸಹಕಾರ ನೀಡಬೇಕು. ದಾಖಲೆಗೊಸ್ಕರ ಕಾರ್ಯಕ್ರಮ ಬೇಡ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮುದಾಯದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.