ಕಾರಟಗಿ: ಭಕ್ತ ಕನಕದಾಸರ ವಿಚಾರ ಮೈಗೂಡಿಸಿಕೊಂಡು ಸಮಾಜದಲ್ಲಿ ಜ್ಞಾನದ ಬೆಳಕು ಹರಿಸಿ ಕತ್ತಲೆ ಕಳೆಯಲು ಸಾಕಷ್ಟು ಶ್ರಮಿಸಿದ ಸಿದ್ಧರಾಮಾನಂದಪುರಿ ಸ್ವಾಮಿಗಳು ನಮ್ಮನ್ನು ಅಗಲಿದ್ದಾರೆ. ಅವರ ವಿಚಾರಧಾರೆ ನಮಗೆ ದಾರಿದೀಪವಾಗಬೇಕಿದೆ, ಶ್ರೀಗಳು ಮೂಡಿಸಿದ ವಿಚಾರಧಾರೆ ಎತ್ತಿ ಹಿಡಿಯಬೇಕಾಗಿದೆ. ಜತೆಗೆ ಶ್ರೀಗಳು ಸಮಾಜದಲ್ಲಿನ ಮೌಢ್ಯತೆ ಕಳಚಿ ಸಮಾಜದ ಶ್ರೇಯಸ್ಸಿಗಾಗಿ ಬಹಳಷ್ಟು ಶ್ರಮಿಸಿದರು ಎಂದು ತುರುವಿಹಾಳ ಗುರುವಿನ ಮಠದ ಮಾದಯ್ಯ ಸ್ವಾಮೀಜಿ ಹೇಳಿದರು.
ಹಾಲುಮತ ಸಂಸ್ಕೃತಿ ಎತ್ತಿದ ಹಿಡಿದ ಶ್ರೀಗಳು, ಕುರುಬ ಸಮುದಾಯ ರಾಜ್ಯದಲ್ಲಿ ಒಂದು ಶಕ್ತಿಯಾಗಿ ಹೊರಹೊಮ್ಮಲು ಗುರುಪೀಠದ ಗುರುಗಳೇ ಪ್ರಮುಖ ಕಾರಣ. ಅಲ್ಲದೆ ಸಿದ್ಧರಾಮಾನಂದಪುರಿ ಗುರುಗಳು ಯಾರು ಕಷ್ಟದಲ್ಲಿದ್ದಾರೆ, ಯಾರು ತುಳಿತಕ್ಕೊಳಗಾಗಿದ್ದಾರೆ ಅಂಥವರನ್ನು ಮೇಲೆತ್ತುವಂಥ ಕಾರ್ಯ ಜೀವನ್ನುದ್ದಕ್ಕೂ ಮಾಡಿದ್ದಾರೆ. ಶ್ರೀಗಳ ಅಗಲಿಕೆ ಆಕಸ್ಮಿಕ. ಮುಂದಿನ ದಿನಗಳಲ್ಲಿ ಮಠ ಮುನ್ನಡೆಸಲು ಸಮಾಜದ ಎಲ್ಲರ ಶ್ರಮ ಅಗತ್ಯವಾಗಿದೆ ಎಂದರು.
ಅಗ್ನಿಕೊಂಡ ದ್ಯಾವಮ್ಮ ದೇವಿ ಆರಾಧಕ ಭೀಮೇಶಪ್ಪ ಅಜ್ಜನವರು ಮಾತನಾಡಿ, ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಶ್ರೀಗಳು ಎಲ್ಲರೂ ಒಂದಾಗಿ ಬಾಳೋಣ ಎಂದು ಸಾಮರಸ್ಯದ ಬದುಕು ತೋರಿಸಿಕೊಟ್ಟವರು. ಅವರ ವಿಚಾರಮಂಥನಗಳು ನಮಗೆಲ್ಲ ದಾರಿದೀಪವಾಗಿವೆ ಎಂದರು.ಸಾನ್ನಿಧ್ಯ ವಹಿಸಿದ ಬಸಾಪಟ್ಟಣದ ನಂಜುಂಡೇಶ್ವರ ಗುರುವಿನಮಠದ ಶ್ರೀಸಿದ್ಧರಾಮಯ್ಯ ತಾತನವರು ಮಾತನಾಡಿ, ಸಿದ್ಧರಾಮಾನಂದ ಸ್ವಾಮೀಜಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಮಹದೇವಯ್ಯ ಮತ್ತು ಜಯಮ್ಮ ದಂಪತಿಗಳ ೨ನೇ ಪುತ್ರರು. ಆಧ್ಯಾತ್ಮಿಕದತ್ತ ಹೆಚ್ಚಿನ ಒಲವು ಮತ್ತು ಸದಾ ಕ್ರಿಯಾಶೀಲ ಮನೋಭಾವ ಹೊಂದಿದ್ದರು. ಶರಣ ಸಾಹಿತ್ಯದ ಜತೆಗೆ ಎಲ್ಲ ಧರ್ಮಗಳ ಅಧ್ಯಯನ ಮಾಡಿದ ಶ್ರೀಗಳು ಪ್ರಥಮವಾಗಿ ಸಿಂಧನೂರಿನಲ್ಲಿ ಕನಕಪೀಠ ಆರಂಬಿಸಿ ನಾಲ್ಕು ವರ್ಷಗಳ ಬಳಿಕ ೨೦೧೧ರಲ್ಲಿ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರೀಜ್‌ನಲ್ಲಿ ಕನಕಗುರುಪೀಠಕ್ಕೆ ಆಗಮಿಸಿ ತಮ್ಮ ಇಚ್ಛೆಯಂತೆ ಪೀಠ ಸ್ಥಾಪನೆ ಮಾಡಿದರು. ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ಜತೆಗೆ ಸಮಾಜ ಮುಖಿ ಸೇವೆ ಸಲ್ಲಿಸಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ವಾಗಿದೆ ಸ್ಮರಿಸಿದರು.
ಪ್ರಮುಖರಾದ ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ದೇವಪ್ಪ ಬಾವಿಕಟ್ಟಿ, ವಾರ್ಡನ್ ಗಂಗಪ್ಪ, ಉಪನ್ಯಾಸಕ ನಾಗರಾಜ ಹುಡೇದ್, ನ್ಯಾಯವಾದಿ ರಾಮಚಂದ್ರಪ್ಪ, ಹನುಂತಪ್ಪ ಚಂದಲಾಪುರ,ಶರಣಪ್ಪ ಪರಕಿ, ಶರಣಪ್ಪ ಕೊಟ್ಯಾಳ, ಲಿಂಗಪ್ಪ ಸಿಂಧನೂರ, ಶ್ರೀಗಳ ಕುರಿತು ನುಡಿನಮನ ಸಲ್ಲಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ತಾಲೂಕು ಕುರುಬ ಸಂಘದ ಅಧ್ಯಕ್ಷ ಉಮೇಶ ಭಂಗಿ, ಜನಗಂಡೆಪ್ಪ ಪೂಜಾರ್, ಹನುಮಂತಪ್ಪ ಮಾಸ್ತರ, ಲಿಂಗಪ್ಪ ರೌಡಕುಂದಿ, ಕೆ.ಮಲ್ಲಪ್ಪ, ಅಗರೆಪ್ಪ, ಡಾ. ಸಾಬಣ್ಣ ಕಟ್ಟಿಕಾರ್, ಶರಣಪ್ಪ ಹತ್ತಿಕಾಳ, ಬಸವರಾಜ ಹತ್ತಿಕಾಳ, ಶರಣಪ್ಪ ಕರಡಿ, ಭೀಮಣ್ಣ ಕರಡಿ, ಮರಿಯಪ್ಪ ಸಾಲೋಣಿ, ದೊಡ್ಡಬಸವರಾಜ್ ಬೂದಿ, ಸಮಾಜ ಕಲ್ಯಾಣ ಅಧಿಕಾರಿ ಗಂಗಪ್ಪ, ಪರಶುರಾಮ ಸಾಲೋಣಿ, ದ್ಯಾಮಣ್ಣ ಬೆನಕಟ್ಟಿ, ವಿಠ್ಠಲ್ ಜೀರಗಾಳಿ, ವಿಕ್ರಮ ಮೇಟಿ ಬೇವಿನಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಇತರರು ಇದ್ದರು. ಶರಣಪ್ಪ ಪರಕಿ ಕಾರ್ಯಕ್ರಮ ನಿರ್ವಹಿಸಿದರು.