ಕನ್ನಡಪ್ರಭ ವಾರ್ತೆ ಬೇಲೂರು ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಚಿಕ್ಕಂದಿನಲ್ಲೇ ಪವಾಡಗಳ ಮೂಲಕ ಮನೆ ಮಾತಾಗಿದ್ದಲ್ಲದೆ, ಪರಿಸರ ಸಂರಕ್ಷಣೆ, ಕೆರೆ ಕಟ್ಟೆಗಳನ್ನು ನಿರ್ಮಿಸಿ ೧೨ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದ ಮಹಾನ್ ಸಾಧಕರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವೇಶ್ವರರು ಹೇಗೆ ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರೋ ಅವರ ಸಮಕಾಲೀನರಾಗಿ ಶಿವಯೋಗಿ ಶ್ರೀ ಸಿದ್ಧರಾಮರು ಸಹ ತಮ್ಮ ವಚನಗಳಿಂದಲೇ ಜನರನ್ನು ಎಚ್ಚರಿಸಿ ಸರಿ ದಾರಿಗೆ ತರುವ ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದಲೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಅಂದೇ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗುವ ಮೂಲಕ ಬಸವೇಶ್ವರರ ಜತೆ ೧೨ನೇ ಶತಮಾನದಲ್ಲಿ ಕ್ರಾಂತಿ ಮಾಡಿದವರು. ಜತೆಗೆ ಜನ ಸಾಮಾನ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ನೀರು ಎಷ್ಟು ಅತ್ಯವಶ್ಯಕ ಎಂಬುದನ್ನು ಅರಿತಿದ್ದ ಅವರು ಅಂದೇ ಕೆರೆಕಟ್ಟೆಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹವರು ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮಗೆಲ್ಲ ಹೆಮ್ಮೆ ಎನಿಸಿದೆ. ಇಂತಹ ಮಹಾನ್ ದಾರ್ಶನೀಕರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ತಹಸೀಲ್ದಾರ್‌ಗ್ರೇಡ್-೨ ಅಶೋಕ್ ಕುಮಾರ್, ಶಿರಸ್ತೆದಾರರಾದ ರಂಗಸ್ವಾಮಿ, ತನ್ವೀರ್ ಅಹಮದ್, ಶ್ವೇತಾ,ಸಿ.ಎಸ್, ಕಂದಾಯಾಧಿಕಾರಿ ಚಂದ್ರೇಗೌಡ, ಮುಖಂಡ ನೂರ್ ಅಹಮದ್ ಸೇರಿದಂತೆ ಇತರರಿದ್ದರು.