ಜನವರಿಯಲ್ಲಿ ಸಿದ್ದಿ ಸಮುದಾಯದ ಸಮಾವೇಶ: ಲಾರೆನ್ಸ್ ಸಿದ್ದಿ

KannadaprabhaNewsNetwork |  
Published : Nov 28, 2026, 02:15 AM IST
ಸಿದ್ದಿ ಸಮುದಾಯದ ಸಮಾಲೋಚನಾ ಸಭೆ ನಡೆಯಿತು. | Kannada Prabha

ಸಾರಾಂಶ

ಬೇರೆ ಬೇರೆ ಸಂಘಟನೆಗಳು ನಮ್ಮ ಸಮುದಾಯದ ಹೆಸರನ್ನು ಬಳಸಿಕೊಂಡು, ಕೆಲವರನ್ನು ಸೇರಿಸಿಕೊಂಡು ಸಮಾವೇಶ, ಸಭೆಗಳನ್ನು ಮಾಡುತ್ತಿದ್ದಾರೆ. ಇಂಥವರನ್ನು ತಡೆಯಲು ಸಮುದಾಯ ಒಟ್ಟಾಗಬೇಕಾದ ಅಗತ್ಯವಿದೆ.

ಯಲ್ಲಾಪುರ: ಸಮುದಾಯದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಬರುವ ಜನವರಿ ತಿಂಗಳಲ್ಲಿ ಸಮುದಾಯದ ಸಮಾವೇಶವನ್ನು ಯಲ್ಲಾಪುರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ತಾಪಂ ಮಾಜಿ ಅಧ್ಯಕ್ಷ ಲಾರೆನ್ಸ್ ಸಿದ್ದಿ ಹೇಳಿದರು.

ಅವರು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಸಿದ್ದಿ ಸಮುದಾಯದ ಆಗುಹೋಗು, ಕಾರ್ಯಚಟುವಟಿಕೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಬೇರೆ ಬೇರೆ ಸಂಘಟನೆಗಳು ನಮ್ಮ ಸಮುದಾಯದ ಹೆಸರನ್ನು ಬಳಸಿಕೊಂಡು, ಕೆಲವರನ್ನು ಸೇರಿಸಿಕೊಂಡು ಸಮಾವೇಶ, ಸಭೆಗಳನ್ನು ಮಾಡುತ್ತಿದ್ದಾರೆ. ಇಂಥವರನ್ನು ತಡೆಯಲು ಸಮುದಾಯ ಒಟ್ಟಾಗಬೇಕಾದ ಅಗತ್ಯವಿದೆ.

ಜಿಲ್ಲೆಯಲ್ಲಿ ಸಿದ್ದಿ ಸಮುದಾಯದವರು ಮೂರೂ ಧರ್ಮಗಳಲ್ಲಿದ್ದಾರೆ. ಪರಿಶಿಷ್ಟ ಪಂಗಡ ವರ್ಗದಲ್ಲಿ ಸೇರಿರುವ ಕಾರಣಕ್ಕೆ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯೋಜನವಾಗುತ್ತಿದೆ. ಆದರೆ ಅಷ್ಟೇ ಸಾಲದು ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಬೇಕು. ಉದ್ಯೋಗದಲ್ಲಿ ನೇರ ನೇಮಕಾತಿ ಆಗಬೇಕು. ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರಕುವಂತಾಗಬೇಕು. ಸಮಾಜದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಸಂಘಟನೆ ಅಗತ್ಯ ಎಂಬುದನ್ನು ಅರಿತು ಸಂಘಟನೆಗೆ ಮುಂದಾಗಿದ್ದೇವೆ ಎಂದರು.

ಸಮಾಜದ ಮುಖಂಡ ಬೆನಿತ್ ಸಿದ್ದಿ ಮಾತನಾಡಿ, ಸಮುದಾಯದವರಲ್ಲಿ ಹೆಚ್ಚಿನವರು ಅತಿಕ್ರಮಣದಾರರಾಗಿದ್ದಾರೆ. ಅವರಿಗೆ ಅತಿಕ್ರಮಣ ಭೂಮಿಯ ಹಕ್ಕು ಕೊಡುವ ಪ್ರಕ್ರಿಯೆ ಇನ್ನೂ ಮರೀಚಿಕೆಯಾಗಿಯೇ ಇದೆ. ಸಮಾವೇಶದ ಮೂಲಕ ಅತಿಕ್ರಮಣ ಭೂಮಿಯ ಪಟ್ಟಾ ನೀಡಲು ಹಕ್ಕೊತ್ತಾಯ ಮಾಡಲಾಗುವುದೆಂದರು.

ನ್ಯಾಯವಾದಿ ಜಯರಾಮ ಸಿದ್ದಿ ಮಾತನಾಡಿ, ೫೧ ಪ.ಪಂಗಡಗಳ ನಡುವೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಮಗೆ ವಿಶೇಷ ಮೀಸಲಾತಿ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರದ ಎಲ್ಲ ನೇಮಕಾತಿಗಳಲ್ಲಿ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡಬೇಕು. ಸಮುದಾಯದ ಹೆಸರು ಬಳಸಿಕೊಂಡು ಸರ್ಕಾರದ ಅನುದಾನಗಳ ದುರ್ಬಳಕೆ ಮಾಡಿಕೊಳ್ಳುವುದು ನಿಲ್ಲಬೇಕು ಎಂದರು.

ಜೂಲಿಯಾನ ಸಿದ್ದಿ ಮಾತನಾಡಿ, ಮೂಲ ಆದಿವಾಸಿಗಳ ಅಭಿವೃದ್ಧಿಗೆ ನಿಗಮ ಮಂಡಳಿ ರಚನೆ ಆಗಬೇಕೆಂದು ಒತ್ತಾಯಿಸಿದರು. ಯಾಕೂಬ್ ಸಿದ್ದಿ, ಗೋಪಾಲ ಸಿದ್ದಿ, ಅಲ್ಲಾಭಕ್ಷ ಸಿದ್ದಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೋಡಿ ಲಿಪಿ ದಾಖಲೆ ಭಾಷಾಂತರ, ಸಂರಕ್ಷಣೆಗೆ ಒಪ್ಪಂದ