ಸಿದ್ದು ಬಜೆಟ್‌: ತುಸು ಕಹಿ, ತುಸು ಸಿಹಿ..!

KannadaprabhaNewsNetwork |  
Published : Feb 17, 2024, 01:19 AM IST
ರಾಜ್ಯ ಬಜೆಟ್‌ | Kannada Prabha

ಸಾರಾಂಶ

ಜಿಲ್ಲೆಯನ್ನು ಭೀಕರವಾಗಿ ಕಾಡುತ್ತಿರುವ ಗುಳೇ, ಉದ್ಯೋಗ ಸಮಸ್ಯೆ, ಘೋಷಣೆಯಾದ ಹೊಸ ತಾಲೂಕುಗಳ ಅಭಿವೃದ್ಧಿ ವಿಚಾರದಲ್ಲಿ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ಬೇಸರಕ್ಕೆ ಕಾರಣವಾಗಿದೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ 2023-24 ರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸಿಹಿಕಹಿಗಳ ಸಮ್ಮಿಶ್ರಣದಂತಿದೆ.

ಹಳೆಯ ಘೋಷಣೆಗಳಿಗೆ ಹೆಸರು ಬದಲಿಸಿ, ಹೊಸ ಜೀವ ತುಂಬುವ ಯತ್ನ ನಡೆದಂತಿದೆ. ಕೆಲವೊಂದು ಹಳೆಯ ಘೋಷಣೆಗಳಿಗೆ ಅನುದಾನ ಹಾಗೂ ಪೂರ್ಣಗೊಳಿಸುವ ನಿರ್ಧಾರ ನಿಟ್ಟುಸಿರು ಮೂಡಿಸಿದ್ದರೆ, ಜಿಲ್ಲೆಯನ್ನು ಭೀಕರವಾಗಿ ಕಾಡುತ್ತಿರುವ ಗುಳೇ, ಉದ್ಯೋಗ ಸಮಸ್ಯೆ, ಘೋಷಣೆಯಾದ ಹೊಸ ತಾಲೂಕುಗಳ ಅಭಿವೃದ್ಧಿ ವಿಚಾರದಲ್ಲಿ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ಬೇಸರಕ್ಕೆ ಕಾರಣವಾಗಿದೆ.

ಸಾಲಮನ್ನಾ ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಬಗ್ಗೆ ರೈತರ ನಿರೀಕ್ಷೆ ಹುಸಿಯಾಗಿದ್ದರೆ, ಕಡೇಚೂರು ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗದ ಆಶಾಭಾವ ಮುದುಡಿದಂತಾಗಿದೆ.

ಬೂದಿಹಾಳ್-ಪೀರಾಪುರ ಹಂತ-1ಕ್ಕೆ ನೀಡಿದಷ್ಟೇ ಆದ್ಯತೆಯನ್ನು 800 ಕೋಟಿ ರು.ಗಳ ವೆಚ್ಚದ ಹಂತ -2ಕ್ಕೆ ನೀಡಿದ್ದರೆ, ಸುರಪುರ ಹಾಗೂ ಶಹಾಪುರ ತಾಲೂಕಿನ 39 ಹಳ್ಳಿಗಳಲ್ಲಿ ನೀರಾವರಿ ಸೌಕರ್ಯದಿಂದ ರೈತರ ಮೊಗದಲ್ಲಿ ಹಸಿರು ಮೂಡಿಸಲು ಸಾಧ್ಯವಾಗುತ್ತಿತ್ತು. ಇದಿಲ್ಲಿ ಆಗಿಲ್ಲ.

ಯಾದಗಿರಿ ಭೀಮಾ ನದಿಯಿಂದ ನೀರನ್ನು ಕಾಲುವೆ ಮುಖಾಂತರ ದೋರನಹಳ್ಳಿ ಹತ್ತಿರದ ವಡಗೇರಾ ತಾಲೂಕು ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಕರ್ಯದ, ಯಾದಗಿರಿ ಜಿಲ್ಲೆಯ ಭೀಮಾ ಪ್ಲಾಂಕ್ ಪ್ರಸಕ್ತ ವರ್ಷದಲ್ಲಿ ಅನುಷ್ಠಾನಗೊಳಿಸುವ ನಿರ್ಧಾರ ಆಶಾಭಾವ ಮೂಡಿಸಿದೆ. ಕೆರೆ ತುಂಬಿಸುವ ಯೋಜನೆಯಡಿ ಗುರುಮಠಕಲ್ ಭಾಗದಲ್ಲಿನ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವ ಘೋಷಣೆ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು ಎಂದಿದೆ. ಹೊಸ ವಿವಿ ನಿರೀಕ್ಷೆಯಲ್ಲಿದ್ದ ಜನರಿಗೆ ಇದು ಕೊಂಚ ಸಮಾಧಾನ ಮೂಡಿಸಬಹುದು.

ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

2016-17 ರಲ್ಲೇ ಯಾದಗಿರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಜೂರಾಗಿ, 4 ಕೋಟಿ ರು.ಗಳ ಅನುದಾನ ಘೋಷಿಸಲಾಗಿತ್ತು. ಇದರಲ್ಲಿ 1.50 ಕೋಟಿ ರು.ಗಳ ಹಣ ಬಿಡುಗಡೆಯಾಗಿದೆ. ಮೂರು ಬಾರಿ ಸ್ಥಳ ಬದಲಾವಣೆ ಹಿನ್ನೆಲೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಮೊದಲು ರಾಚೋಟಿ ವೀರಣ್ಣ ದೇವಸ್ಥಾನ ಬಳಿ ನಿಗದಿಪಡಿಸಿದ್ದನ್ನು ಬದಲಾಯಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಅನ್ನೋ ಕಾರಣಕ್ಕೆ ನಂತರದಲ್ಲಿ ಮುದ್ನಾಳ್‌ ಸಮೀಪದ ಮೆಡಿಕಲ್‌ ಕಾಲೇಜು ಬಳಿ ಗುರುತಿಸಲಾಯಿತಾದರೂ, ಮೆಡಿಕಲ್‌ ಕಾಲೇಜಿಗೆ ಹೆಚ್ಚಿನ ಜಾಗ ಬೇಕಿದ್ದರಿಂದ ಮತ್ತೇ ಸ್ಥಳಾಂತರ ಅನಿವಾರ್ಯವಾಯಿತು. ಮುಂಡರಗಿ ಬಳಿ ದೂರ ಅನ್ನುವ ಕಾರಣಕ್ಕೆ ಬದಲಾಯಿಸಿ, ಈಗ ಆರ್‌ಟಿಓ ಕಚೇರಿ ಹತ್ತಿ 4 ಎಕರೆ ಗುರುತಿಸುವ ಕಾರ್ಯ ನಡೆದಿದೆ. ಹೀಗಾಗಿ, ಹಳೆಯ ಯೋಜನೆಗೆ ಹೊಸ ಪಾಲಿಶ್‌ ನೀಡಿದಂತಿದೆ.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ 3000 ಎಕರೆ ಹಾಗೂ ಹೊಸದಾಗಿ ಮತ್ತೇ 3300 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪಿಸಿ, ಉದ್ಯೋಗ ಭರವಸೆ ಈ ಬಜೆಟ್‌ನಲ್ಲಿ ಚಿವುಡಿ ಹಾಕಿದಂತಿದೆ. ಹೊಸ ಎಂಜನಿಯರಿಂಗ್‌ ಕಾಲೇಜು, ಗುರುಮಠಕಲ್‌, ಹುಣಸಗಿ ಹಾಗೂ ವಡಗೇರಾದಂತಹ ಹೊಸ ತಾಲೂಕುಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ಚಕಾರವಿಲ್ಲ. ಸುಮಾರು ಆರೇಳುದ ಶಕಗಳ ಹಿಂದಿನ ತಿಂಥಣಿ ಸಮೀಪದ ಕೃಷ್ಣಾ ನದಿ ಸೇತುವೆ ಅಥವಾ ದೇವಾಪುರ ಸಮೀಪದ ಶಿಥಿಲಾವಸ್ಥೆಯಲ್ಲಿರುವ ಹಿರೇಹಳ್ಳ ಬ್ರಿಡ್ಜ್‌ ರಿಪೇರಿ ಮಾತಿಲ್ಲ.

ರಾಜ್ಯವ್ಯಾಪಿ ಯೋಜನೆಗಳಲ್ಲಿ ಇಲ್ಲಿನನವರಿಗೆ ಅದು ಸದುಪಯೋಗವಾಗುತ್ತಾದರೂ, ಬಹುಪಾಲು ನಿರೀಕ್ಷಿತ ಯೋಜನೆಗಳು ಜಿಲ್ಲೆಯಲ್ಲಿ ಬೆರಳಣಿಕೆಷ್ಟು ಸಿಗುತ್ತವೆ ಅನ್ನೋ ಮಾತುಗಳಿವೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ