ಯಾರೋ ಕಟ್ಟಿದ ಕೋಟೆಯಲ್ಲಿ ಸಿದ್ದು ಮೆರವಣಿಗೆ: ಸಂಸದ ಮುನಿಸ್ವಾಮಿ

KannadaprabhaNewsNetwork |  
Published : Apr 04, 2024, 01:02 AM IST
೩ಕೆಎಲ್‌ಆರ್-೮ಮುಳಬಾಗಿಲು ತಾಲ್ಲೂಕಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯನ್ನು ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿಯವರು ಕೊಟ್ಟ ಕೊರೋನಾ ಲಸಿಕೆಯಿಂದ ಬದುಕುಳಿದಿದ್ದಾರೆ, ಅಲ್ಲದೇ ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಹಸಿವು ನೀಗಿಸಲು ಉಚಿತ ಅಕ್ಕಿ ನೀಡಿ ಜನರಿಗೆ ಆಸರೆಯಾದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲು

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಕೇಳುವ ಸಿದ್ದರಾಮಯ್ಯನವರೇ ಜೆಡಿಎಸ್ ಪಕ್ಷ ಇಲ್ಲದೇ ಇದ್ದಿದ್ದರೆ ನೀವು ಯಾರು ಅನ್ನೋದು ರಾಜ್ಯಕ್ಕೆ ಗೊತ್ತಾಗುತ್ತಲೇ ಇರಲಿಲ್ಲ, ದೇವೇಗೌಡರು ನಿಮ್ಮನ್ನು ಸಚಿವ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ಈಗ ಕಾಂಗ್ರೆಸ್‌ನಲ್ಲಿ ಯಾರೋ ಕಟ್ಟಿದ ಕೋಟೆಯಲ್ಲಿ ರಾಜನಾಗಿ ಮೆರೆಯುತ್ತಿದ್ದೀರಿ ಅಷ್ಟೇ. ಮೊದಲು ಮೇಲೇರಿದ ಏಣಿ ಒದಿಯುವ ನೀಚ ಬುದ್ದಿ ಬಿಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.

ಮುಳಬಾಗಿಲು ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯವರಿಗೆ ಕೊರೋನಾ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟ ಉಚಿತ ಲಸಿಕೆ ಹಾಕದಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಇರುತ್ತಿರಲಿಲ್ಲ, ದೇಶದ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿಯವರು ಕೊಟ್ಟ ಕೊರೋನಾ ಲಸಿಕೆಯಿಂದ ಬದುಕುಳಿದಿದ್ದಾರೆ, ಅಲ್ಲದೇ ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರತಿಯೊಬ್ಬರ ಹಸಿವು ನೀಗಿಸಲು ಉಚಿತ ಅಕ್ಕಿ ನೀಡಿ ಜನರಿಗೆ ಆಸರೆಯಾದರು ಎಂದರು.

ಮೂರು ತಲೆಮಾರಿಗಾಗುವಷ್ಟು ಹಣವನ್ನು ನಾವು (ಕಾಂಗ್ರೆಸ್‌ನವರು) ಮಾಡಿಕೊಂಡಿದ್ದೇವೆ ಮತ್ತು ಅಂಬೇಡ್ಕರ್‌ರನ್ನು ಹೀನಾಯವಾಗಿ ನಡೆಸಿಕೊಂಡಿದ್ದು ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್‌ರವರೇ ಹೇಳಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ, ಅದಕ್ಕಾಗಿ ಮತ ಚಲಾಯಿಸುವಾಗ ಯೋಚಿಸಿ ಮತದಾನ ಮಾಡಲು ಮನವಿ ಮಾಡಿದರು.

ಬಲಗೈ, ಎಡಗೈ ಅಂತ ಕಿತ್ತಾಡಿ ಇಡೀ ದೇಶದ ಜನರ ಮುಂದೆ ರಾಜೀನಾಮೆಯ ನಾಟಕವಾಡಿ ಕೊನೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿಸಲು ಯೋಗ್ಯತೆ ಇಲ್ಲದೆ ಎಲ್ಲಿಯೋ ಬೆಂಗಳೂರಿನಿಂದ ಸೂಟ್ ಕೇಸ್ ವ್ಯಕ್ತಿಯನ್ನು ಕರೆತಂದಿದ್ದಾರೆ, ಇನ್ನು ಇಪ್ಪತ್ತು ದಿನಗಳಲ್ಲಿ ಆ ವ್ಯಕ್ತಿ ಓಡಾಡಿ ಸೂಟ್ ಕೇಸ್ ನಲ್ಲಿರುವ ಹಣ ಖಾಲಿ ಮಾಡಿಕೊಂಡು ಸೋತು ವಾಪಸ್ ಬೆಂಗಳೂರಿಗೆ ಓಡಿಹೋಗುತ್ತಾರೆ ಎಂದು ಭವಿಷ್ಯ ನುಡಿದರು.

ಡಿ.ಕೆ.ಶಿವಕುಮಾರ್‌ರಿಗೆ ಕಾಟ ಕೊಡುತ್ತಿರುವುದು, ಡಿಕೆಶಿನ ಜೈಲಿಗೆ ಕಳುಹಿಸಿದ್ದು ಸಿದ್ದರಾಮಯ್ಯನವರೇ ಅಂತ ಸ್ವತಃ ಡಿ.ಕೆ.ಶಿವಕುಮಾರ್ ತಾಯಿಯೇ ಹೇಳಿದ್ದಾರೆ. ಈ ಎಲ್ಲಾ ದೊಂಬರಾಟಗಳಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ಬುದ್ಧಿ ಕಲಿಸಬೇಕು ಎಂದರು.

ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಪಕ್ಷವನ್ನು ನಂಬಿ ರಾಜ್ಯದಲ್ಲಿ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.ಈ ಮೂರೂ ಸ್ಥಾನಗಳಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಿಕೊಟ್ಟರೆ ಕುಮಾರಣ್ಣನವರು ಮೋದಿಯವರ ಮುಂದೆ ಧೈರ್ಯವಾಗಿ ತಲೆಯೆತ್ತಿ ನಿಲ್ಲಬಹುದು ಎಂದು ಮನವಿ ಮಾಡಿದರು.

ಎಂಎಲ್‌ಸಿ ಅನಿಲ್ ಕುಮಾರ್ ಹೋದಲ್ಲಿ ಬಂದಲ್ಲೆಲ್ಲಾ ನನ್ನ ವಿರುದ್ಧ ಅಪಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ, ಅವರ ಬಂಡವಾಳ ಹೇಳಿದರೆ ನಾಚಿಕೆಯಾಗುತ್ತದೆ. ರಾಜೀನಾಮೆ ಕೊಡುತ್ತೇನೆಂದು ನಾಟಕವಾಡಿ ನಗೆಪಾಟಲಿಗೀಡಾದರು. ರಾಜ್ಯ ಕಾಂಗ್ರೆಸ್ ನವರಿಗೆ ಜೆಡಿಎಸ್ ಕಂಡರೆ ಭಯ, ಹೋದಲ್ಲಿ ಬಂದಲ್ಲೆಲ್ಲಾ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೆಡಿಎಸ್ ವಿರುದ್ಧ ಮಾತನಾಡುತ್ತಾರೆ ಎಂದು ಛೇಡಿಸಿದರು.

ಕೋಲಾರ ಲೋಕಸಭಾ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ದೇಶದ ಹಿತ ದೃಷ್ಟಿಯಿಂದ ಮತ ಚಲಾಯಿಸಬೇಕಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು, ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದೇನೆ, ದಯವಿಟ್ಟು ಈ ಬಾರಿ ನನಗೆ ಆಶೀರ್ವಾದ ಮಾಡಬೇಕಾಗಿ ಮನವಿ ಮಾಡಿದರು.

ಸಭೆಯಲ್ಲಿ ಸಮೃದ್ಧಿ ಮಂಜುನಾಥ್, ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಮುಖಂಡ ಸೀಗೆನಹಳ್ಳಿ ಸುಂದರ್ ಮತ್ತಿರರು ಇದ್ದರು.

ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ 15 ಸಾವಿರ ಕೋಟಿ ಅನುದಾನ:

ಕಳೆದ ೬೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ಯಾಮಾರಿಸಿಕೊಂಡು ಬಂದಿದೆ, ದೇಶದ ಜನರನ್ನು ಸದೃಢಪಡಿಸಬೇಕಾದರೆ ಕರ್ನಾಟಕದ ಕೋಲಾರ ಕ್ಷೇತ್ರದಲ್ಲಿ ಮೊದಲ ಗೆಲುವಾಗಬೇಕು, ಅದಕ್ಕಾಗಿ ಕೋಲಾರ ಲೋಕಸಭಾ ಕ್ಷೇತ್ರದ ಜನರು ಒಗ್ಗಟ್ಟಿನಿಂದ ಜೆಡಿಎಸ್ ಪಕ್ಷದ ಚಿಹ್ನೆಯ ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಮತ ಚಲಾಯಿಸಲು ಮನವಿ ಮಾಡಿದರು.ಕಳೆದ ಐದು ವರ್ಷಗಳಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ೧೫ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ, ಯರಗೋಳ್ ಯೋಜನೆಗೆ ಹಣ ಕೊಟ್ಟಿದ್ದು ಕುಮಾರಸ್ವಾಮಿಯವರು, ಆದರೆ ಕಾಂಗ್ರೆಸ್‌ನವರು ಆ ಯೋಜನೆಯ ಹಣವನ್ನು ಲೂಟಿ ಹೊಡೆದಿದ್ದು, ಯೋಜನೆಯನ್ನು ನಾವು ಮಾಡಿದ್ದು ಎಂದು ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!