ಹಾವೇರಿ:ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದಿರುವುದು ಡಿ.ಕೆ. ಶಿವಕುಮಾರ್‌ಗೆ ತೂಗು ಕತ್ತಿ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತೂಗುವ ಕತ್ತಿ. ತೂಗುವ ಕತ್ತಿ ಬೀಳುವುದೇ ಹೆಚ್ಚು ಎಂದರು.
ಸಿದ್ದರಾಮಯ್ಯ ಅವರಿಗೆ ಕಷ್ಟ ಕಾಲ ಬಂದಾಗಲೆಲ್ಲ ಸಹಾಯ ಮಾಡಿದ್ದೇ. ಯಾವಾಗ ಅವರು ಕಾಂಗ್ರೆಸ್‌ಗೆ ಹೋದರೋ ಆಗ ಅವರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದೆ. ರಾಜಕೀಯವಾಗಿ ಯಾವತ್ತೂ ಹೊಂದಾಣಿಕೆ ಆಗಿಲ್ಲ. ವೈಯಕ್ತಿಕವಾಗಿ ಸಂಬಂಧ ಚೆನ್ನಾಗಿ ಇದೆ ಎಂದು ಹೇಳಿದರು.
ಒಬಿಸಿಗೆ ಆಘಾತ: ಸಿದ್ದರಾಮಯ್ಯ ಸಮಾಜವಾದಿಯಾಗಿ ಸಾಮಾಜಿಕ ಕಳಕಳಿ ಇರುವ ನಾಯಕ, ಅವರನ್ನು ತೆಗೆಯುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಮಂಡಲ್ ಕಮಿಷನ್‌ನಿಂದ ಹಿಡಿದು ಯಾವಾಗಲೂ ಅನ್ಯಾಯ ಮಾಡುತ್ತ ಬಂದಿದ್ದಾರೆ. ರಾಜೀವ್ ಗಾಂಧಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಯಾಕೆ ಬೇಕು ಎಂದು ಕೇಳಿದ್ದರು. ರಾಹುಲ್ ಗಾಂಧಿ ಜಾತಿ ಗಣತಿ ಮಾಡಬೇಕು ಎನ್ನುತ್ತಾರೆ. ಒಬಿಸಿಗೆ ಪರ ಮಾತನಾಡುತ್ತಲೇ ಒಬಿಸಿ ಮುಖ್ಯಮಂತಿಯನ್ನು ತೆಗೆದು ಹಾಕಿದ್ದಾರೆ. . ಹೀಗಾಗಿ ಕರ್ನಾಟಕದಲ್ಲಿ ಒಬಿಸಿ ಜನರು ಭ್ರಮ ನಿರಶನಗೊಂಡಿದ್ದಾರೆ. ಸಿದ್ದರಾಮಯ್ಯ ಸುಮ್ಮನಿರಬಹುದು. ಅವರ ಭಾವನೆ ಅರ್ಥ ಮಾಡಿಕೊಂಡಿರುವ ಜನ ಸುಮ್ಮನಿರಲ್ಲ ಎಂದರು.ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಯಾವಾಗಲೂ ಎಟಿಎಂ. ಯಾರು ಮಾಸ್ ನಾಯಕರಾಗುತ್ತಾರೆ ಅವರನ್ನು ಅದೇ ರೀತಿ ಬಳಸಿಕೊಂಡಿದ್ದಾರೆ. ದೇವರಾಜ್ ಅರಸು ಆರು ವರ್ಷ ಮುಖ್ಯಮಂತ್ರಿಯಾಗಿದ್ದರು. 78ರಲ್ಲಿ ಗೆದ್ದು ಅಧಿಕಾರಕ್ಕೆ ಬಂದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ವೀರೇಂದ್ರ ಪಾಟೀಲರು, ಬಂಗಾರಪ್ಪ ಅವರನ್ನು ತೆಗೆದರು. ಸಿದ್ದರಾಮಯ್ಯ ಅದೇ ಸಾಲಿಗೆ ಬರುತ್ತಾರೆ.ಈ ರಾಜ್ಯದಲ್ಲಿ ಏಳು ವರ್ಷ ಅಧಿಕಾರ ಮುಗಿಸಿದ ಸಿಎಂಗಳಿಗೆ ಆಘಾತ ಬರುತ್ತದೆ. ನಿಜಲಿಂಗಪ್ಪನವರು ಎರಡನೇ ಅವಧಿಗೆ ಸಿಎಂ ಆಗಿದ್ದಾಗ ಏಳು ವರ್ಷಕ್ಕೆ ಅಧಿಕಾರ ಕಳೆದುಕೊಂಡರು. ಅದೇ ರೀತಿ ದೇವರಾಜ ಅರಸು. ರಾಮಕೃಷ್ಣ ಹೆಗಡೆ ಈಗ ಸಿದ್ದರಾಮಯ್ಯ ಇದು ಒಂದು ರೀತಿ ಸೆವೆನ್ ಈಯರ್ ಸಿಂಡ್ರೋಮ್ ಎಂದು ವ್ಯಾಖ್ಯಾನಿಸಿದರು.