ಮುಂಡಗೋಡ: ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡದ ವಾಟರ್‌ಮ್ಯಾನ್‌ನ್ನು ಕೆಲಸದಿಂದ ತೆಗೆದು ಹಾಕುವಂತೆ ಆಗ್ರಹಿಸಿ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಸೋಮವಾರ ಮಹಿಳೆಯರು ಖಾಲಿ ಕೊಡದೊಂದಿಗೆ ಗ್ರಾಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಚವಡಳ್ಳಿ ಗ್ರಾಮದ ವಾರ್ಡ್ ನಂ. ೧ರಲ್ಲಿ ಕಳೆದ ಕೆಲವು ತಿಂಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತಿಲ್ಲ. ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಇಲ್ಲಿಯ ವಾಟರ್‌ಮ್ಯಾನ್ ಸರಿಯಾಗಿ ನೀರು ಬಿಡುತ್ತಿಲ್ಲ. ಕೆಲ ಬಾರಿ ನೀರು ಬಿಟ್ಟು ಹೋವರು ವಾಪಸ್ ಬರುವುದೇ ಇಲ್ಲ. ಸರಿಯಾಗಿ ಕೆಲಸ ಮಾಡದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಆತನನ್ನು ಕೆಲಸದಿಂದ ತೆಗೆದು ಹಾಕಿ ಎಂದು ಹಲವು ಬಾರಿ ಗ್ರಾಪಂಗೆ ದೂರು ನೀಡಿದರೂ ಯಾವುದೇ ಪ್ರೆಯೋಜನವಾಗಿಲ್ಲ. ಇದರಿಂದ ಗ್ರಾಮಸ್ಥರು ಸಮರ್ಪಕ ನೀರು ಸಿಗದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಿಡಿಒ ಗಣಪತಿ ಪಿಲ್ಲೋಜಿ ಹಾಗೂ ಗ್ರಾಪಂ ಉಪಾಧ್ಯಕ್ಷ ಪ್ರದೀಪ ಚವ್ಹಾಣ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಸಿದ್ದಾಪುರ: ತಾಲೂಕಿನ ಗೊಂಟನಾಳ(ಕಲ್ಮನೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಇತ್ತೀಚೆಗೆ ಜರುಗಿತು.
ಬಿದ್ರಕಾನ ಗ್ರಾಪಂ ಅಧ್ಯಕ್ಷೆ ಸರೋಜಾ ಡಿ. ನಾಯ್ಕ ಅವರು ರಜತ ಮಹೋತ್ಸವವನ್ನು ಉದ್ಘಾಟಿಸಿ, ಊರಿನವರ ಸಂಘಟನೆ ಹಾಗೂ ಶಿಕ್ಷಣಾಭಿಮಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಜಿ. ಗೌಡ ಅಧ್ಯಕ್ಷತೆ ವಹಿಸಿದ್ದರು.ರಜತ ಮಹೋತ್ಸವ ಗೌರವಾಧ್ಯಕ್ಷ ವೆಂಕಟರಮಣ ವಿ. ಹೆಗಡೆ ಗೊಂಟನಾಳ ಚಿಣ್ಣರ ಚಿತ್ತಾರ ಹಸ್ತಪ್ರತಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಎಸ್‌ಡಿಎಂಸಿ ಅಧ್ಯಕ್ಷರನ್ನು, ಅಂಗನವಾಡಿ ಶಿಕ್ಷಕಿಯರನ್ನು, ಯಕ್ಷಗುರು ಶಶಿಕಲಾ ಸುಬ್ರಾಯ ಹೆಗಡೆ ದೇವಣಗದ್ದೆ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.ಶಾಲೆಯ ಹಳೆಯ ವಿದ್ಯಾರ್ಥಿ ರಂಜೀತ ಚಿಕ್ಕು ದೇವಾಡಿಗ ಶಾಲೆಗೆ ₹೨೫ ಸಾವಿರ ಮೌಲ್ಯದ ಕಂಪ್ಯೂಟರನ್ನು ದೇಣಿಗೆಯಾಗಿ ನೀಡಿದರು.ಗ್ರಾಪಂ ಸದಸ್ಯೆ ಮಮತಾ ಚನ್ನಯ್ಯ, ಜಯಂತ ಹೆಗಡೆ ಕಲ್ಲಾರೆಮನೆ, ಶಾಮಲಾ ಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಾರ್ಯದರ್ಶಿ ಗುರುರಾಜ ನಾಯ್ಕ, ನಮೃತಾ ಪೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಎಂ. ನಾಯ್ಕ ಇತರರು ಉಪಸ್ಥಿತರಿದ್ದರು.ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಂತ ಸ್ವಾಗತಿಸಿದರು. ಮುಖ್ಯಶಿಕ್ಷಕ ಮನೋಹರ ವರದಿ ವಾಚಿಸಿದರು. ಗೀತಾ ಶ್ರೀಧರ, ಶಿಲ್ಪಾ, ವಿನಯ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.