ಇಂದು ಬೆಂಗಳೂರಿನಲ್ಲಿ ಸಿಎಂ ಮನೆಗೆ ಮುತ್ತಿಗೆ: ಪ್ರಭಾಕರ ಪಾಟೀಲ್ ಇಂಗಳದಾಳ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ನಾರಾಯಣಪೂರ ಬಲದಂಡೆ ಮತ್ತು ಎಡದಂಡೆ ನಾಲಾ ವ್ಯಾಪ್ತಿಯ ಜಮೀನುಗಳಿಗೆ ಫೆಬ್ರುವರಿ ಅಂತ್ಯದವರೆಗೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ಜ.2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ತಿಳಿಸಿದರು.

ನಾರಾಯಣಪೂರ ಬಲ-ಎಡದಂಡೆ ನಾಲೆಗಳಿಗೆ ಫೆಬ್ರುವರಿವರೆಗೆ ನೀರು ಹರಿಸಲು ಒತ್ತಾಯ

ಕನ್ನಡಪ್ರಭ ವಾರ್ತೆ ದೇವದುರ್ಗ

ನಾರಾಯಣಪೂರ ಬಲದಂಡೆ ಮತ್ತು ಎಡದಂಡೆ ನಾಲಾ ವ್ಯಾಪ್ತಿಯ ಜಮೀನುಗಳಿಗೆ ಫೆಬ್ರುವರಿ ಅಂತ್ಯದವರೆಗೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ಜ.2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ತಿಳಿಸಿದರು.

ಪಟ್ಟಣದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಡ ಮತ್ತು ಬಲದಂಡೆ ನಾಲೆ ವ್ಯಾಪ್ತಿಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ, ಹತ್ತಿ, ತೊಗರಿ, ಸಜ್ಜೆ ಬೆಳೆಗಳನ್ನು ಹಾಕಲಾಗಿದೆ. ಫೆಬ್ರುವರಿ ಅಂತ್ಯದವರೆಗೆ ಕಡ್ಡಾಯವಾಗಿ ಕಾಲುವೆಗಳಿಗೆ ನೀರು ಹರಿಸಬೇಕಾಗಿದೆ.

ಆದರೆ ಆಲಮಟ್ಟಿ ಜಲಾಶಯದಲ್ಲಿ 60 ಟಿಎಂಸಿ, ಬಸವ ಜಲಾಶಯದಲ್ಲಿ 8 ಟಿಎಂಸಿ ನೀರು ಲಭ್ಯವಿದೆ. ನಾವು ಕೇಳುತ್ತಿರುವದು ಕೇವಲ 3 ಟಿಎಂಸಿ ನೀರು ಮಾತ್ರ. ಅಧಿಕಾರಿಗಳ ಜೊತೆಗೆ ಸಂಘದ ಪದಾಧಿಕಾರಿಗಳು ಜಲಾಶಯಗಳಿಗೆ ಭೇಟಿ ನೀಡಿ, ನೀರಿನ ಲಭ್ಯತೆಯನ್ನು ಪರಿಶೀಲಿಸಿದ್ದು, ಅಧಿಕಾರಿಗಳು ನೀರು ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ನೀರು ಮಾರಾಟ ದಂಧೆ ನಡೆದಿದ್ದು, ನಮ್ಮ ಜಲಾಶಯಗಳಿಂದ ಜಿಂದಾಲ್ ಕಂಪನಿಗೆ ನೀರು ಮಾರಾಟ ಮಾಡಲಾಗುತ್ತದೆ ಹಾಗೂ ನೆರೆಯ ಆಂಧ್ರಪ್ರದೇಶದ ಫ್ಯಾಕ್ಟರಿಗೆಳಿಗೆ ನೀರು ಮಾರಾಟ ಮಾಡುವ ಶಂಕೆ ವ್ಯಕ್ತವಾಗಿದೆ.

17ಟಿಎಂಸಿ ನೀರು ಆವಿಯಾಗುತ್ತದೆ ಎಂದು ಅಧಿಕಾರಿಗಳು ನೀಡುವ ಉತ್ತರ ಹಾಸ್ಯಾಸ್ಪದವಾಗಿದೆ. ಕೇವಲ 3ರಿಂದ 4 ಟಿಎಂಸಿ ನೀರು ಮಾತ್ರ ಆವಿಯಾಗುತ್ತದೆ ಎಂದು ನೀರಾವರಿ ತಜ್ಞರ ಅಭಿಪ್ರಾಯವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಉಢಾಪೆ ಮಾತನಾಡು ತ್ತಿದ್ದು, ರಾಜಕಾರಣಿಗಳು, ಕೈಗಾರಿಕಾ ವಲಯದ ಒತ್ತಡಗಳಿಗೆ ಮಣಿದಿದ್ದಾರೆ. ನೀರು ಇದೆ ಬಿಡಬಹುದು ಎಂಬ ಮನೋಭಾವ ಅಧಿಕಾರಿಗಳಲ್ಲಿ ಕಂಡುಬರುತ್ತಿದೆ. ಆದರೆ ಅಧಿಕಾರಿ ವರ್ಗ ಅಸಹಾಯಕರಾಗಿದ್ದಾರೆ ಎಂದರು.

ಕೃಷಿ ಕ್ಷೇತ್ರ ಕೂಡ ಒಂದು ಕೈಗಾರಿಕಾ ವಲಯ ಹೌದು. ರೈತರು ದೇಶಕ್ಕೆ ಆಹಾರ ಉತ್ಪನ್ನ ಮಾಡುತ್ತಿದ್ದು, ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಾರೆ. ಆದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜಿಂದಾಲ್ ಕಂಪನಿಗೆ ನೀರು ಮಾರಾಟ ಮಾಡುವ ಉದ್ದೇಶದಿಂದ ಜಲಾಶಯದಿಂದ ಜಮೀನುಗಳಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.

ಎರಡನೇ ಬೆಳೆಗೆ ನೀರಿನ ಸಲುವಾಗಿ ಅನೇಕ ಬಾರಿ ಹೋರಾಟ, ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರೂ ಗಮನ ಹರಿಸಲಿಲ್ಲ. ಇತ್ತೀಚಿಗೆ ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯನವರು ಬಂದಾಗಲೂ ಕೂಡ ಮನವಿ ಸಲ್ಲಿಸಿದರೂ, ಗಮನ ಕೊಡಲೇ ಇಲ್ಲಾ. ಹೀಗಾಗಿ ರಾಜ್ಯದಲ್ಲಿ ಸರ್ಕಾರ ಕಾರ್ಪೋರೇಟ್‌ ಪರ ಎಂಬುದು ಸಾಬೀತಾಗಿದೆ. ರೈತರಿಗೆ ಮೋಸ ಮಾಡುವ ತಂತ್ರ ಅಡಗಿದೆ. ಅದರೆ ರೈತರ ಕಷ್ಟ-ನಷ್ಟ ಬಹು ಗಂಭೀರತೆ ಇದೆ.

ನಾರಾಯಣಪೂರ ಬಲ-ಎಡದಂಡೆ ವ್ಯಾಪ್ತಿಯಲ್ಲಿ ಸುಮಾರು 40-50 ಸಾವಿರ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ, ಜೋಳ, ಹತ್ತಿ, ಸಜ್ಜೆ, ತೊಗರಿ ಬೆಳೆಗಳಿಗೆ ನೀರು ಖಂಡಿತ ಬೇಕಾಗಿದೆ. ಪ್ರತಿ ಎಕರೆಗೆ ರೈತರು 1 ರಿಂದ 1.5 ಲಕ್ಷ ಖರ್ಚು ರು. ಮಾಡಿದ್ದಾರೆ. ನೀರು ನೀಡದಿದ್ದರೆ ಆಹಾರ ಉತ್ಪನ್ನದ ಹಾನಿಯ ಜೊತೆಗೆ ಸುಮಾರು 450ಕೋಟಿ ರು.ಹಾನಿಯನ್ನು ರೈತರು ಅನುಭವಿಸಬೇಕಾಗುತ್ತದೆ.ಈಗಾಗಲೇ ಕಾಲುವೆಗಳಿಗೆ ಡಿ.30ರಿಂದ ನೀರು ಹರಿಸುವದನ್ನು ಬಂದ್ ಮಾಡಲಾಗಿದೆ.ಜನೇವರಿ ಮತ್ತು ಫೆಬ್ರುವರಿ ಅಂತ್ಯದವರೆಗೆ ನೀರು ಹರಿಸಿದರೆ ಮಾತ್ರ ರೈತರ ಕಷ್ಟಕ್ಕೆ ಪರಿಹಾರ ಸಿಕ್ಕಂತಾಗುತ್ತದೆ. ಈ ಗಂಭೀರ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರ ಗಮನ ಸೆಳೆಯಲು ಬೆಂಗಳೂರಿನಲ್ಲಿ ಜ.2ರಂದು 11ಗಂಟೆಗೆ ಸಿಎಂ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲಾಗುವದು. ಮಂಡ್ಯ ಜಿಲ್ಲೆಯ ಸಂಘಟನೆ ಪದಾಧಿಕಾರಿಗಳು ಹಾಗೂ ಶಹಪೂರ ಮತ್ತು ದೇವದುರ್ಗ ತಾಲೂಕಿನ ರೈತರು ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಬೂದೆಯ್ಯ ಸ್ವಾಮಿ, ಹಾಜಿ ಮಸ್ತಾನ, ತಮ್ಮಣ್ಣಗೌಡ, ಹುಸೇನ್ಸಾಬ್, ಹನುಮಗೌಡ, ಉಮೇಶಗೌಡ ನರಗುಂಡ ಹಾಗೂ ಇತರರು ಇದ್ದರು.

Share this article