ಶಿವಮೊಗ್ಗ : ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಇದೀಗ ನಾನೇ ಉದ್ಘಾಟಿಸಿದ್ದು, ನನ್ನ ಸೌಭಾಗ್ಯ. ಇದು ಸಿಗಂದೂರು ಶ್ರೀ ಚೌಡೇಶ್ವರಿಯ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸಿಗಂದೂರು ಸೇತುವೆ ಉದ್ಘಾಟನೆ ಹಿನ್ನೆಲೆಯಲ್ಲಿ ಸಾಗರದ ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೋರಿಕೆ ಮೇರೆಗೆ ಶಂಕುಸ್ಥಾಪನೆಗೆ ನಾನು ಇಲ್ಲಿಗೆ ಬಂದಿದ್ದೆ. ಸೇತುವೆ ಕಾಮಗಾರಿಯ ವೆಚ್ಚ ಹೆಚ್ಚಾಗಿತ್ತು, ಇದರ ಜೊತೆಗೆ ಬೇರೆ, ಬೇರೆ ಅಡಚಣೆಗಳಿದ್ದವು. ಆದರೂ, ಸಿಗಂದೂರು ಚೌಡೇಶ್ವರಿಯ ಆಶೀರ್ವಾದದಿಂದ ಕೆಲಸ ಪೂರ್ಣವಾಗಿದೆ. ಹೀಗಾಗಿ, ಈ ಸೇತುವೆಗೆ ‘ಶ್ರೀ ಮಾತಾ ಸಿಗಂದೂರು ಚೌಡೇಶ್ವರಿ ದೇವಿ’ ಹೆಸರನ್ನು ಘೋಷಣೆ ಮಾಡುತ್ತೇನೆ. ಮುಂದೆ ಇದೇ ಹೆಸರನ್ನು ಇಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಬೆನ್ನು ಬಿಡದ ಬೇತಾಳದಂತೆ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳುವ ವ್ಯಕ್ತಿ. ಚಿಕ್ಕ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ₹473 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣ ಮಾಡಿಸಿದ್ದಾರೆ. ಹಿರೇಬಾಸ್ಕರ ಮತ್ತು ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ ಮುಳುಗಡೆಗೊಂಡಿದ್ದ ದ್ವೀಪದ ಸಂತ್ರಸ್ತರ ಬವಣೆ ನಂತರ ಇಲ್ಲಿ ಸೇತುವೆ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ ಎಂದರು.
ಹಿಂದೆ ವಾಜಪೇಯಿ ಕಾಲದಲ್ಲಿ 36,000 ಕಿ.ಮೀ. ಉದ್ದದ ರಸ್ತೆ ಆಗಿತ್ತು. ಮೋದಿ ಸರ್ಕಾರದ ಹತ್ತು ವರ್ಷದ ಅವಧಿಯಲ್ಲಿ 50,000 ಕಿ.ಮೀ. ರಸ್ತೆ ಮಾಡಿದ್ದೇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕಳೆದ 5 ವರ್ಷದ ಅವಧಿಯಲ್ಲಿ ₹5 ಲಕ್ಷ ಕೋಟಿ ಕಾಮಗಾರಿ ನಡೆಯುತ್ತಿದೆ. ದೆಹಲಿಯಿಂದ ಕರ್ನಾಟಕಕ್ಕೆ ಬರಲು ಮುಂಬೈ-ಕೊಲ್ಲಾಪುರ ಮೂಲಕ ಬರಬೇಕು. ಈಗ ಹೊಸ ರಸ್ತೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಆಗಲಿದೆ. ಈ ರಸ್ತೆ ಮುಂಬೈ ಭಾಗದಿಂದ ಸೂರತ್, ನಾಸಿಕ್, ಅಹಮದ್ ನಗರ, ಕರ್ನೂಲ್, ಬೆಂಗಳೂರು, ತ್ರಿವೆಂಡ್ರಂ ಮೂಲಕ ಸಾಗಲಿದೆ. ಶೇ.50ರಷ್ಟು ಕೆಲಸ ಆಗಿದೆ ಎಂದು ಹೇಳಿದರು.
ಬಾಗಿನ ಅರ್ಪಿಸಿ ಸೇತುವೆ ಲೋಕಾರ್ಪಣೆ:
ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ಬೆಳ್ಳಿ ಗದೆ ಮತ್ತು ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಮಾಜಿ ಸಿಎಂ ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಸಿಗಂದೂರು ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದ ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನೂತನ ಸೇತುವೆಯ ಮೇಲೆ ಆಯೋಜಿಸಲಾಗಿದ್ದ ಹೋಮ, ಹವನಗಳಲ್ಲಿ ಗಡ್ಕರಿ ಭಾಗಿಯಾಗಿ, ಪೂರ್ಣಾಹುತಿಯಲ್ಲಿ ಫಲ ಸಮರ್ಪಣೆ ಮಾಡಿದರು. ಬಳಿಕ, ಮಳೆಯ ನಡುವೆಯೇ ಶರಾವತಿ ಹಿನ್ನೀರಿಗೆ ಬಾಗಿನ ಅರ್ಪಿಸುವ ಮೂಲಕ ನೂತನ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಚಂಡೆ, ಡೊಳ್ಳು, ವಾದ್ಯ, ವೀರಗಾಸೆ ಮುಂತಾದ ಜಾನಪದ ತಂಡಗಳ ಪ್ರದರ್ಶನ ಮೆರಗು ನೀಡಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಉಪಸ್ಥಿತರಿದ್ದರು.
ತುಮಕೂರು-ಶಿವಮೊಗ್ಗ ನೂತನ ಹೆದ್ದಾರಿಯ ಕಾಮಗಾರಿಯ ಕೆಲಸ ಶೇ.80ರಷ್ಟು ಆಗಿದೆ. ಇದು ಡಿಸೆಂಬರ್ ಒಳಗೆ ಲೋಕಾರ್ಪಣೆಯಾಗಲಿದೆ. ಇದರಿಂದ ಬೆಂಗಳೂರು-ಶಿವಮೊಗ್ಗ ರಸ್ತೆ ಸಂಚಾರ 7 ಗಂಟೆಯಿಂದ 3 ಗಂಟೆಗೆ ಇಳಿಯಲಿದೆ. ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯ ಕಾಮಗಾರಿ 2026ರ ಫೆಬ್ರವರಿಯಲ್ಲಿ ಪೂರ್ಣವಾಗಲಿದೆ. ಇದರಿಂದ ಶಿವಮೊಗ್ಗ-ಚಿತ್ರದುರ್ಗ ಸಂಚಾರಕ್ಕೆ 3 ಗಂಟೆ ಬದಲು ಒಂದೂವರೆ ಗಂಟೆಯಲ್ಲಿ ಸಂಚರಿಸಬಹುದು. ಬೆಂಗಳೂರು-ಚೆನ್ನೈ ನೂತನ ಹೆದ್ದಾರಿಯಿಂದಾಗಿ 2 ಗಂಟೆಯಲ್ಲಿ ಸಂಚಾರ ಸಾಧ್ಯವಾಗಲಿದೆ. ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಹೊಸ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.
ಹುಬ್ಬಳ್ಳಿ-ಧಾರವಾಡ ನೂತನ ರಸ್ತೆಯಿಂದ ಸಂಚಾರದ ಅವಧಿ 40 ನಿಮಿಷದಿಂದ 15 ನಿಮಿಷಕ್ಕೆ ಇಳಿಯಲಿದೆ. ಯಡಿಯೂರಪ್ಪನವರ ಕೋರಿಕೆ ಮೇರೆಗೆ ಹೊಸದಾಗಿ ಬೆಂಗಳೂರು-ತುಮಕೂರು ರಸ್ತೆ ಅಭಿವೃದ್ಧಿ, ಶಿರಾಡಿಘಾಟ್ ಮೂಲಕ ಶಿವಮೊಗ್ಗ- ಮಂಗಳೂರು ರಸ್ತೆ ಅಭಿವೃದ್ಧಿಗೆ ಡಿಪಿಆರ್ ಮಾಡಲು ಸೂಚಿಸಲಾಗಿದೆ ಎಂದರು.
ಸೇತುವೆ ಲೋಕಾರ್ಪಣೆ ಸಂತೃಪ್ತಿ: ಬಿಎಸ್‌ವೈಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿರುವುದು ಸಾರ್ಥಕತೆ, ಸಂತೃಪ್ತಿ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಸಾಗರದಲ್ಲಿ ನಡೆದ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸತ್ ಸದಸ್ಯನಾದ ಅವಧಿಯಲ್ಲಿ ಅನುಮೋದನೆಗೊಂಡ ಯೋಜನೆ ಇಂದು ಉದ್ಘಾಟನೆಯಾಗಿರುವುದು ಸಂತಸವಾಗಿದೆ ಎಂದರು. ಶರಾವತಿ ಹಿನ್ನೀರು ಭಾಗದ ಜನರ ಬಹಳ ದಿನದ ಕನಸು ನನಸಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ನ್ಯಾಯ, ಗೌರವಕ್ಕೆ ಈ ಸೇತುವೆ ಸಾಕ್ಷಿಯಾಗಿದೆ. ಜಿಲ್ಲೆಗೆ ಮಾತ್ರವಲ್ಲ, ರಾಜ್ಯ, ದೇಶಕ್ಕೆ ಐತಿಹಾಸಿಕ ಮೈಲುಗಲ್ಲು ಎಂದರು.
ಗಡ್ಕರಿಯಿಂದ ದೊಡ್ಡ ರಸ್ತೆ ಕ್ರಾಂತಿ: ಪ್ರಹ್ಲಾದ್ ಜೋಶಿ
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಚಿವ ನಿತಿನ್ ಗಡ್ಕರಿ ಅವರು ಈ ದೇಶದಲ್ಲಿ ಬಹುದೊಡ್ಡ ರಸ್ತೆ ಕ್ರಾಂತಿ ನಿರ್ಮಾಣ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಗರದಲ್ಲಿ ನಡೆದ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇವತ್ತು ಅವರು ಗಡ್ಕರಿ ಆಗಿ ಉಳಿದಿಲ್ಲ, ರೋಡ್ಕರಿಯಾಗಿ ಉಳಿದಿದ್ದಾರೆ. ಮ್ಯಾನ್ ಆಫ್ ನ್ಯಾಷನಲ್ ಹೈವೇ ಅಂತ ಕರೆಯುವುದಾದರೆ ಸಚಿವ ನಿತಿನ್ ಗಡ್ಕರಿ ಅವರನ್ನು ಕರೆಯಬೇಕು. ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಹೋರಾಟಕ್ಕೆ ಬಹುದೊಡ್ಡ ಇತಿಹಾಸವಿದೆ. ಹೋರಾಟದ ಪರಿಣಾಮ ಇಂದು ಸೇತುವೆ ನಿರ್ಮಾಣ ಮಾಡಿ ಜನರಿಗೆ ಸಮರ್ಪಿಸಿದ್ದಾರೆ ಎಂದರು.
ಸಿಗಂದೂರು ಬ್ರಿಜ್‌ಗೆ ಚಾಲನೆಯಲ್ಲಿ ಸಂವಾದ ಸಮಸ್ಯೆ ಆಗಿದೆ: ಪರಂತುಮಕೂರು: ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಯಾವುದೇ ವಿವಾದವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನೆಗೆ ಯಾರ ವಿರೋಧವೂ ಇಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಅವರೇ ಬಂದು ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಈ ಉದ್ಘಾಟನೆಯನ್ನು ಮುಂದಕ್ಕೆ ಹಾಕಿ ಎಂದಷ್ಟೇ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಆ ಮೂಲಕ ಈ ಸೇತುವೆ ಉದ್ಘಾಟನೆ ಸಂಬಂಧ ರಾಜ್ಯ ಸರ್ಕಾರದ ವಿರೋಧವನ್ನು ಸಮರ್ಥಿಸಿಕೊಂಡರು. ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜ್ಯ ಸರ್ಕಾರದ್ದೂ ಪಾಲು ಇರುತ್ತದೆ ಎಂದು ಅವರು ಹೇಳಿದರು.
ಒಂದೊಂದು ಬಾರಿ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗದಿದ್ದಾಗ ನಮ್ಮಲ್ಲೇ ಇರುವ ಒಬ್ಬರು ಸಚಿವರೊಬ್ಬರನ್ನು ನಿಯೋಜಿಸುತ್ತಾರೆ. ಇದು ರಾಜ್ಯ ಸರ್ಕಾರದ ಪದ್ದತಿ. ಆದರೆ ಎಲ್ಲೋ ಒಂದು ಕಡೆ ಈ ವಿಚಾರದಲ್ಲಿ ಸಂವಹನ ಸಮಸ್ಯೆ ಆಗಿರಬಹುದು. ಅದನ್ನು ಸರಿಪಡಿಸಿಕೊಂಡರಾಯಿತು ಎಂದರು.