ಜು.14ಕ್ಕೆ ಸಿಗಂದೂರು ಸೇತುವೆ ಲೋಕಾರ್ಪಣೆ : ಸಿಗಂದೂರು ಚೌಡೇಶ್ವರಿ ಹೆಸರು

KannadaprabhaNewsNetwork |  
Published : Jul 06, 2025, 01:48 AM ISTUpdated : Jul 06, 2025, 01:41 PM IST
ಪೋಟೋ: 5ಎಸ್‌ಎಂಜಿಕೆಪಿ06ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಶರಾವತಿ ಹಿನ್ನೀರು ಪ್ರದೇಶದ ಮೇಲೆ ಹಾದು ಹೋಗಿರುವ ಹೊಳೆಬಾಗಿಲು-ಕಳಸವಳ್ಳಿ ನಡುವೆ ನಿರ್ಮಾಣಗೊಡಿರುವ ಸಿಗಂದೂರು ಸೇತುವೆಯ ಲೋಕಾರ್ಪಣೆ ಜು.14 ರಂದು ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ 

ಶಿವಮೊಗ್ಗ: ಶರಾವತಿ ಹಿನ್ನೀರು ಪ್ರದೇಶದ ಮೇಲೆ ಹಾದು ಹೋಗಿರುವ ಹೊಳೆಬಾಗಿಲು-ಕಳಸವಳ್ಳಿ ನಡುವೆ ನಿರ್ಮಾಣಗೊಡಿರುವ ಸಿಗಂದೂರು ಸೇತುವೆಯ ಲೋಕಾರ್ಪಣೆ ಜು.14 ರಂದು ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ಸಂಪರ್ಕ ಸವಲತ್ತು ಇಲ್ಲದೆ ಮುಳುಗಡೆ ಜನರು ಉತ್ಸಾಹವನ್ನೇ ಕಳೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಗ್ರಾಪಂ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಎಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಬಗ್ಗೆ ಸ್ಥಳ ನಿಗದಿಯಾಗಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಮಾಲೋಚಿಸಿ ಸ್ಥಳ ನಿಗದಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಹಸಿರುಮಕ್ಕಿ, ಸಿಗಂದೂರು ಸೇತುವೆ ಬಗ್ಗೆ ಕಾಂಗ್ರೆಸ್ಸಿಗರು ಟೀಕೆ ಮಾಡುತ್ತಿದ್ದಾರೆ. ನಮ್ಮ ಅಭಿವೃದ್ಧಿ ಕೆಲಸಗಳೇ ಅವರಿಗೆ ಉತ್ತರವಾಗಲಿದೆ. ದೇಶದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದರು. 

ಸಿಗಂದೂರು ಸೇತುವೆ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪನವರು. ಅವರ ಕಾಲದಲ್ಲಿ ಸುಮಾರು 371 ಕೋಟಿ ರು.ಗಳ ವೆಚ್ಚದಲ್ಲಿ 2018ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. ನಂತರದಲ್ಲಿ ಆ ಹಣ ವಾಪಾಸ್ಸು ಕೂಡ ಹೋಗಿತ್ತು. ನಾನು ಸಂಸದನಾದ ಮೇಲೆ ಅದು ಮತ್ತೆ ಮರಳಿಬರುವಂತೆ ಮಾಡಿ, ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಿದೆವು. ಈಗ ಕಾಲಕೂಡಿ ಬಂದಿದೆ. ಮುಹೂರ್ತ ಕೂಡ ಫಿಕ್ಸ್ ಆಗಿದೆ ಎಂದರು

. ಅನೇಕರು ಈ ಸೇತುವೆ ನಿರ್ಮಾಣಕ್ಕಾಗಿ ಒತ್ತಾಯ ಮಾಡಿದ್ದಾರೆ. ಇದು ಬಹುದಿನದ ಕನಸಾಗಿದೆ. ದೇಶದ ಅತ್ಯಂತ ಉದ್ದದ 2ನೇ ಸೇತುವೆ ಇದು. ಶರಾವತಿ ಸಂತ್ರಸ್ತರಿಗೆ ಜೀವ ನೀಡುವ ಯೋಜನೆ ಇದಾಗಿದೆ. ಇದರ ಜೊತೆ ಜೊತೆಯಲ್ಲಿಯೇ ಸುಮಾರು 5 ಕಡೆ ವಿವಿಧ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಅವೆಲ್ಲವೂ ಶೀಘ್ರವೇ ಮುಗಿಯಲಿದೆ. ಸುಮಾರು 315 ಕೋಟಿ ರು. ವೆಚ್ಚದಲ್ಲಿ ಪಟುಗೊಪ್ಪ ಮತ್ತು ಹಸಿರುಮಕ್ಕಿ ಸೇತುವೆಗಳು ನಿರ್ಮಾಣವಾಗಿವೆ. ಇವೆಲ್ಲವೂ ಈ ಸೇತುವೆಗೆ ಸಂಪರ್ಕ ಕಲ್ಪಿಸಲಿದೆ. ಹಾಗಾಗಿ ಈ ಭಾಗದಲ್ಲಿ ಒಟ್ಟು 6 ಸೇತುವೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದೆ ಎಂದು ಹೇಳಿದರು.

ಟೀಕೆ ಮಾಡುವವರು ಮಾಡಲಿಬಿಡಿ:

ಸಿಗಂದೂರು ಸೇತುವೆಯ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳ ಜೊತೆ ವೀಕ್ಷಣೆಮಾಡಲು ಅಲ್ಲಿಗೆ ಹೋಗಿದ್ದೆವು. ಅಲ್ಲಿ ಯಾವುದೇ ಫೋಜು ಕೊಡಲು ನಾವು ಹೋಗಿಲ್ಲ. ಟೀಕೆ ಮಾಡುವವರು ಮಾಡಲಿಬಿಡಿ ಎಂದರು.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶದ ರಸ್ತೆಗಳ ಬಗ್ಗೆ ಆಸಕ್ತಿವಹಿಸಿದೆ. ಬಿಜೆಪಿ ಸರ್ಕಾರ ಬರುವ ಮೊದಲು ಕೇವಲ 90 ಸಾವಿರ ಕಿ.ಮೀ. ರಸ್ತೆ ಇತ್ತು. ಆದರೆ ಈಗ ಅದು 1.50 ಲಕ್ಷದಷ್ಟು ಹೆಚ್ಚಾಗಿದೆ. ಗಡಿರಸ್ತೆಗಳು, ನಿರ್ಲಕ್ಷ್ಯಕ್ಕೆ ಒಳಗಾದ ಕುಗ್ರಾಮ ರಸ್ತೆಗಳನ್ನು ಕೂಡ ಗುರುತಿಸಿ ರಸ್ತೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಸುಮಾರು 20 ಸಾವಿರ ಕೋಟಿ ರು. ಅನುದಾನ ಬಂದಿದೆ. ಇದೆಲ್ಲಾ ಅಭಿವೃದ್ಧಿ ಅಲ್ಲವೇ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಎಸ್.ಎಸ್.ಜ್ಯೋತಿಪ್ರಕಾಶ್, ಕೆ.ಜಿ.ಕುಮಾರಸ್ವಾಮಿ, ಆರ್.ಕೆ.ಸಿದ್ರಾಮಣ್ಣ, ಸಿ.ಎಚ್.ಮಾಲತೇಶ್, ಹರಿಕೃಷ್ಣ, ವಿನ್ಸೆಂಟ್ ರೋಡ್ರೀಗಸ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ರಾಮು ಇದ್ದರು.

ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು 

ಈ ತೂಗು ಸೇತುವೆಗೆ ಏನು ಹೆಸರಿಡಬೇಕೆಂದು ಈಗಾಗಲೇ ಬಿಜೆಪಿ ಮುಖಂಡರೆಲ್ಲ ಸೇರಿ ನಿರ್ಧರಿಸಿದ್ದೇವೆ. ಆ ಪ್ರಕಾರ ಸಿಗಂದೂರು ಚೌಡೇಶ್ವರಿ ಸೇತುವೆ ಎಂಬ ಹೆಸರು ಸೂಕ್ತ ಎಂದುಕೊಂಡಿದ್ದೇವೆ. 

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಎನ್‍ಓಸಿ ಕೂಡ ಬೇಕಾಗುತ್ತದೆ. ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಪುರಸ್ಕರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಈ ಭಾಗದಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯ ತುಂಬಾ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರ ಧೈವಭಕ್ತಿಯ ತಾಣವೂ ಹೌದು. ಒಂದು ಧಾರ್ಮಿಕ ಸ್ಥಳವಾಗಿದೆ ಹಾಗಾಗಿ ಈ ಸೇತುವೆಗೆ ದೇವಿಯ ಹೆಸರನ್ನು ಇಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ