ಬ್ಯಾಕೋಡು: 423 ಕೋಟಿ ರು. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ನಾಲ್ಕೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್ ತಿಂಗಳವರೆಗೆ ಕಾಲವಕಾಶವಿದೆ. ಆದರೆ, ಅದಕ್ಕೂ ಮುಂಚೆಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಬುಧವಾರ ಹಿನ್ನೀರು ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಬೇಕು. ಈ ಸಂಬಂಧ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಕೇಂದ್ರದಿಂದ ರೀಜನಲ್ ಆಫೀಸರ್ ಶರ್ಮಾ ಎಂಬುವವರ ನೇತೃತ್ವದ ತಂಡ ಪರಿಶೀಲಿಸಿದರು. ಜೂ.15ರೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಭಾಗದಲ್ಲಿ ಹಲವು ಸೇತುವೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಸುತ್ತಾ ಸೇತುವೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 766 ಸಿ ಆಗಿ ಮೇಲ್ದರ್ಜೆಗೇರಿಸಿ ಒಂದು ಕಿ.ಮೀ ಹೊಸನಗರ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮುಕ್ಕಾಲು ಕಿ.ಮೀ.ನ ಬೆಕ್ಕೋಡಿ ಸೇತುವೆ, ಹಾಲಪ್ಪ ಅವರ ಅವಧಿಯಲ್ಲಿ ಪಟಗುಪ್ಪ ಸೇತುವೆ, ಕಾಗೋಡು ತಿಮ್ಮಪ್ಪ ಅವರ ಶ್ರಮದಿಂದ ಹಸಿರುಮಕ್ಕಿ ಸೇತುವೆ ಸೇರಿದಂತೆ ನಾನಾ ಕಾಮಗಾರಿ ನಡೆಸಲಾಗಿದೆ. ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಅನುಕೂಲ ಮಾಡಲಾಗಿದೆ. ಇದರಿಂದ ಅನೇಕ ಯಾತ್ರ ಸ್ಥಳಕ್ಕೆ ತೆರಳಲು ಅವಕಾಶವಾಗಲಿದೆ ಎಂದು ತಿಳಿಸಿದರು.