ಸಿಗಂದೂರು ದೇಗುಲ ಹಾಳು ಮಾಡಲು ಸಾಧ್ಯವಿಲ್ಲ: ಹರತಾಳು ಹಾಲಪ್ಪ

KannadaprabhaNewsNetwork |  
Published : Jul 24, 2025, 12:51 AM IST
ಪೋಟೋ: 23ಎಸ್‌ಎಂಜಿಕೆಪಿ02 ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಒಂದು ತಿಂಗಳಲ್ಲಿ ಸಿಗಂದೂರು ದೇವಾಲಯವನ್ನು ಹಾಳು ಮಾಡುತ್ತೇನೆ ಎಂಬ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ನೀಡಿದ್ದಾರೆ. ಸಿಗಂದೂರು ದೇವಾಲಯವನ್ನು ಯಾರ ಕೈಯಿಂದಲೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಂದು ತಿಂಗಳಲ್ಲಿ ಸಿಗಂದೂರು ದೇವಾಲಯವನ್ನು ಹಾಳು ಮಾಡುತ್ತೇನೆ ಎಂಬ ಹೇಳಿಕೆಯನ್ನು ಸಚಿವ ಮಧು ಬಂಗಾರಪ್ಪ ನೀಡಿದ್ದಾರೆ. ಸಿಗಂದೂರು ದೇವಾಲಯವನ್ನು ಯಾರ ಕೈಯಿಂದಲೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹರಿಹಾಯ್ದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಣ್ಯಾತ್ಮ ಬಂಗಾರಪ್ಪನವರ ಹೊಟ್ಟೆಯಲ್ಲಿ ಹುಟ್ಟಿದ ಮೇಲೆ ಸರಿಯಾಗಿ ಇರಬೇಕು. ತಮಗೆ ಪ್ರಬುದ್ಧತೆ ಇಲ್ಲ ಎಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಈ ವೇಳೆ ನಾವು ವಿಡಿಯೋವನ್ನು ತಿರುಚಿದ್ದೇವೆ ಎಂಬ ಹೇಳಿಕೆಗಳು ಬರುತ್ತಿವೆ. ನಾವು ವಿಡಿಯೋ ತಿರುಚಿದ್ದರೆ, ಅದನ್ನು ಎಫ್‌ಎಸ್‌ಎಲ್‌ಗೆ ನೀಡಿ ತನಿಖೆ ಮಾಡಿಸಲಿ ಎಂದರು.

ಚಿತ್ರಶೆಟ್ಟಿಹಳ್ಳಿಯಲ್ಲಿ ರೈತ ರಾಮಪ್ಪ ಎಂಬುವರ 350 ಅಡಕೆ ಗಿಡಗಳನ್ನು ಅರಣ್ಯ ಇಲಾಖೆಯವರು ಕಿತ್ತಿದ್ದಾರೆ. ಹೊಸನಗರದ ಹೊಸವೆಯಲ್ಲಿಯೂ ಅಡಕೆ ಮರಗಳನ್ನು ಹಾಳು ಮಾಡಿದ್ದಾರೆ. ಮುಳುಗಡೆ ರೈತರಿಗೆ ನ್ಯಾಯ ಕೊಡಿಸಲು ಇವರ ಕೈಯಲ್ಲಿ ಆಗುತ್ತಿಲ್ಲ. ನಾನು ಹೋರಾಟಗಾರ ಎಂದು ಕಂಬಳಿ ಹಾಕಿಕೊಂಡು ರೈತರ ಪರವಾಗಿ ಪಾದಯಾತ್ರೆ ಮಾಡಿದ್ದರು. ಈಗ ಅಧಿಕಾರ ಸಿಕ್ಕಿದೆ. ರೈತರ ಜಾಗವನ್ನು ತೆರವು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಮಧು ಬಂಗಾರಪ್ಪ ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಣ್ಯಾತ್ಮ ಬಂಗಾರಪ್ಪ ಅವರ ಕ್ಷೇತ್ರದಲ್ಲಿ ಕ್ಲಬ್ ನಡೆಯುತ್ತಿದೆ. ವಿದ್ಯಾಮಂತ್ರಿಯಾದವರು 40 ಸಾವಿರ ಲೀಡ್‌ನಲ್ಲಿ ಗೆದ್ದರೆ ಕ್ಲಬ್ ನಡೆಸಬಹುದಾ? ಇಸ್ಪೀಟ್ ಕ್ಲಬ್‌ಗಳು ನಡೆದರೂ ಎಸ್‌ಪಿ ಏನು ಮಾಡುತ್ತಿದ್ದಾರೆಂದು ಗೊತ್ತಿಲ್ಲ ಎಂದು ಕಿಡಿಕಾರಿದರು.

ನನ್ನ ಇತಿಹಾಸ ಬಿಚ್ಚಿಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ. ಅವರದ್ದೂ ಸ್ವಲ್ಪ ಇತಿಹಾಸ ನಮಗೆಲ್ಲಾ ಗೊತ್ತಿದೆ. ಅದನ್ನು ಬಿಚ್ಚಿಡಲೂ ಗೊತ್ತಿದೆ. ದೊಡ್ಡವರ ಇತಿಹಾಸವನ್ನು ಅವರು ಅಧ್ಯಯನ ಮಾಡಲಿ. ಅಸಂಬದ್ಧ ಮಾತುಗಳನ್ನು ಬಿಡಲಿ ಎಂದು ಕುಟುಕಿದರು.

ಮಧು ಬಂಗಾರಪ್ಪ ಮಾತೆತ್ತಿದರೆ ಸಂಸದ ರಾಘವೇಂದ್ರ ಬಗ್ಗೆ ಮಾತನಾಡುತ್ತಾರೆ. ರಾಘವೇಂದ್ರ ಅವರು ಬಸ್ ಸ್ಟ್ಯಾಂಡ್ ಅನ್ನೂ ಕಟ್ಟಿಸಿದ್ದಾರೆ, ಜೊತೆಗೆ ಏರ್‌ಪೋರ್ಟ್ ಸಹ ಕಟ್ಟಿಸಿದ್ದಾರೆ. ಆದರೆ, ಜಿಲ್ಲೆಗೆ ನಿಮ್ಮ ಕೊಡುಗೆ ಏನೂ ಎಂದು ಪ್ರಶ್ನಿಸಿದ ಅವರು, ಮೆಗ್ಗಾನ್ ಆಸ್ಪತ್ರೆಗೆ ಬಂಗಾರಪ್ಪನವರು ಗುದ್ದಲಿ ಪೂಜೆ ಮಾಡಿದ್ದರು, ಯಡಿಯೂರಪ್ಪನವರು ಅದನ್ನು ಪೂರ್ಣಗೊಳಿಸಿದರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯ್ಯಕ್ಷ ಜಗದೀಶ್ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಶಿವರಾಜ್ ಇದ್ದರು.

ಅರಣ್ಯಸಚಿವರು ತಮ್ಮ ಆದೇಶ ಹಿಂಪಡೆಯಲಿ

‘ಸಾಕು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸುವಂತಿಲ್ಲ’ ಎಂದು ಅರಣ್ಯ ಸಚಿವರು ಆದೇಶ ಹೊರಡಿಸಿದ್ದಾರೆ. ಮಲೆನಾಡಿನಲ್ಲಿ ದನಕರುಗಳನ್ನು ಸಾಕುತ್ತೇವೆ, ಕಾಡಿಗೆ ಹೋಗದೆ ಇದ್ದರೆ ಮಲೆನಾಡಿನಲ್ಲಿ ಆಗುವುದಿಲ್ಲ. ಕೂಡಲೇ ಈ ಆದೇಶ ಹಿಂಪಡೆಯಬೇಕು. ಸಾಕು ಪ್ರಾಣಿಗಳಿಂದಲೇ ಬೀಜ ಪ್ರಸರಣ ಆಗುತ್ತಿದೆ. ಕಾಡನ್ನು ಬೆಳೆಸಿ ಉಳಿಸಿರುವುದೇ ರೈತರು ಮತ್ತು ಜಾನುವಾರುಗಳು. ರಾಜ್ಯದ ದುರಾದೃಷ್ಟ ಅಂದರೆ ಮಲೆನಾಡಿನವರು ಯಾರೂ ಅರಣ್ಯ ಸಚಿವರಾಗುತ್ತಿಲ್ಲ. ಸರ್ಕಾರದ ಈ ಆದೇಶ ಅಸಂಬದ್ಧವಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯನವರು ವಾಣಿಜ್ಯ ಇಲಾಖೆಗೆ 1.20 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೀಡಿದ ನೋಟಿಸ್‌ಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಇದು ಡಿಜಿಟಲ್ ಇಂಡಿಯಾವನ್ನು ತಡೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''