ಕನ್ನಡಪ್ರಭ ವಾರ್ತೆ ಮೈಸೂರುನರ್ಸಿಂಗ್ ಸೇವೆ ಅತ್ಯುತ್ತಮ ಸೇವೆಯಾಗಿದ್ದು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮೈಸೂರು ಶಾಖೆಯ ಮುಖ್ಯಸ್ಥ ಡಾ. ಸದಾನಂದ ಕಿವಿಮಾತು ಹೇಳಿದರು.ನಗರದ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸಿಗ್ಮಾ ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಸೈನ್ಸ್ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನರ್ಸಿಂಗ್ ಸೇವೆ ಅತ್ಯುತ್ತಮ ಸೇವೆಯಾಗಿದ್ದು ಸೇವಾ ಮನೋಭಾವದಿಂದ ತಾವೆಲ್ಲರೂ ಮುಂದೆ ಕೆಲಸ ಮಾಡಬೇಕು, ಶಿಸ್ತಿನಿಂದ ಕಲಿತ ಈ ನರ್ಸಿಂಗ್ ಪದವಿ ಮುಂದೆ ನಿಮ್ಮ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಹೇಳಿದರು.ರ್ಯಾಂಕ್, ಡಿಸ್ಟಿಂಗ್ಷನ್ ಪಡೆದ ವಿದ್ಯಾರ್ಥಿಗಳು, ಎಲ್ಲಾ ಪದವೀಧರರಿಗೆ ಪದವಿ, ಪ್ರಶಸ್ತಿ ಪತ್ರ ನೀಡಿ ಶುಭ ಕೋರಿದರು.ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲ ಡಾ.ಕೆ. ಮಾದಪ್ಪ ಮಾತನಾಡಿ, ನಮ್ಮ ಕಾಲೇಜಿಗೆ ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಷ್ಟೇ ಉತ್ತಮ ಫಲಿತಾಂಶ ಬರುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಇದರಲ್ಲಿ ನಮ್ಮ ಕಾಲೇಜಿನ ಸಿಬ್ಬಂದಿ ವರ್ಗದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಕಲಿಕೆ ತುಂಬಾ ಚೆನ್ನಾಗಿರುವುದರಿಂದಲೇ ಈ ಫಲಿತಾಂಶ ಮೈಸೂರಿನಲ್ಲೇ ಪ್ರಥಮ ಸ್ಥಾನ ಬಂದಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಎಲ್ಲಾ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವಶಾಂತಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಮಹಾಲಿಂಗಯ್ಯ ಮಾತನಾಡಿ, ವಿಶ್ವಶಾಂತಿ ಸಂಸ್ಥೆ ಮತ್ತು ಸಿಗ್ಮಾ ಫೌಂಡೇಷನ್ ಆರೋಗ್ಯ ಮತ್ತು ಶಿಕ್ಷಣಕ್ಕೆ 2012ರಲ್ಲಿ ಆಸ್ಪತ್ರೆಯನ್ನು ಆರೋಗ್ಯ ಸೇವೆಗೆಂದು ಮಾಡಿ ನಂತರ 2019 ರಲ್ಲಿ ಶಿಕ್ಷಣದ ದೃಷ್ಟಿಯಿಂದ ಸಿಗ್ಮಾ ಮತ್ತು ವಿಎಸ್ಎಸ್ ಜೊತೆಗೂಡಿ ನರ್ಸಿಂಗ್ ಕಾಲೇಜನ್ನು ಪ್ರಾರಂಭಮಾಡಿದ್ದು ಈಗ ವಿದ್ಯಾರ್ಥಿಗಳ ಸಾಧನೆಯನ್ನು ನೋಡಿದರೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮೆಚ್ಚಬೇಕು ಎಂದರು.ಟ್ರಸ್ಟಿಗಳಾದ ಡಾ. ರಾಜೇಶ್ವರಿ ಮಾದಪ್ಪ, ಶೈಲಾ ಶಂಕರ್ ಅವರು ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೋಭ ಕೋರಿದರು.