ಅರೆಶಿರೂರು ಸೊಸೈಟಿ ಕಳ್ಳತನಕ್ಕೆ ಯತ್ನ: ಕಳ್ಳರು ಸ್ವಲ್ಪದರಲ್ಲೇ ಪಾರು
ಕನ್ನಡಪ್ರಭ ವಾರ್ತೆ ಕುಂದಾಪುರಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಲೈವ್ ಮಾನಿಟರಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ್ದ ಮುಸುಕುಧಾರಿ ದುಷ್ಕರ್ಮಿಗಳ ಸಂಚು ವಿಫಲಗೊಂಡಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರಿನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅರೆಶಿರೂರು ಶಾಖೆಗೆ ಶನಿವಾರ 2.42ರ ಸುಮಾರಿಗೆ ಆಗಮಿಸಿದ ಇಬ್ಬರು ಮುಸುಕುಧಾರಿಗಳು, ಹೊರಗಡೆ ಗೋಡೆಗೆ ಅಳವಡಿಸಲಾಗಿದ್ದ ಬಲ್ಬ್ ಕಿತ್ತು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ನಗರದ ಹೊರವಲಯ ಅಂಕದಕಟ್ಟೆ ಬಳಿ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿ ಟಿವಿ ಲೈವ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.ಮಧ್ಯರಾತ್ರಿ 2:42ಕ್ಕೆ ಸೊಸೈಟಿಗೆ ಆಗಮಿಸಿದ ಇಬ್ಬರು ಕಳ್ಳರು, 2:47ರ ಸುಮಾರಿಗೆ ಗ್ಯಾಸ್ ಕಟ್ಟರ್ ಮೂಲಕ ಕಿಟಿಕಿ ಗ್ರಿಲ್ ಕತ್ತರಿಸಲಾರಂಭಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಸವಿತ್ರ ತೇಜ್ ಹಾಗೂ ಠಾಣಾಧಿಕಾರಿ ತಿಮ್ಮೇಶ್ ಮತ್ತು ಸಿಬ್ಬಂದಿ ಕೇವಲ ಹದಿನೈದು ನಿಮಿಷದೊಳಗೆ ಸ್ಥಳಕ್ಕಾಗಮಿಸುವ ಮೊದಲೇ ಇಬ್ಬರು ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಸ್ವಲ್ಪದರಲ್ಲೇ ಬಚಾವ್ ಆದ ದುಷ್ಕರ್ಮಿಗಳು:
ಸೆಕ್ಯೂರಿಟಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸೊಸೈಟಿ ಮುಖ್ಯಸ್ಥರಿಗೆ ಮಾಹಿತಿ ರವಾನಿಸಿದ್ದರು. ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿಯ ಮಾತನ್ನು ಮೀರಿ ಪೊಲೀಸರು ಬರುವ ಮೊದಲೇ ಸೊಸೈಟಿ ವಾಹನ ಸ್ಥಳಕ್ಕಾಗಮಿಸಿದ್ದರಿಂದ ಶಬ್ದ ಗಮನಿಸಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಬರುವ ಎರಡು-ಮೂರು ನಿಮಿಷಗಳಲ್ಲೇ ಕಳ್ಳರು ಕಾಲ್ಕಿತ್ತಿದ್ದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಸದ್ಯ ಸಂಭವಿಸಬಹುದಾದ ಬಹುದೊಡ್ಡ ಕಳ್ಳತನವೊಂದು ತಪ್ಪಿ ಹೋಗಿದ್ದು, ನಿಟ್ಟುಸಿರು ಬಿಡುವಂತಾಗಿದೆ.--------------------ಕಳ್ಳತನಕ್ಕೆ ಸೈನ್ ಇನ್ ಸೆಕ್ಯೂರಿಟಿ ಬ್ರೇಕ್!ಕೃಷ್ಣ ಪೂಜಾರಿ ಅವರ ಮಾಲೀಕತ್ವದ ಸೇಫ್ ಕುಂದಾಪುರ ಹೆಸರಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಆರಂಭಗೊಂಡಸೈನ್ ಇನ್ ಸೆಕ್ಯೂರಿಟಿ ಇಂದು ಕರ್ನಾಟಕದ 23 ಜಿಲ್ಲೆಗಳಲ್ಲಿ 850ಕ್ಕೂ ಮಿಕ್ಕಿ ಕ್ಯಾಮೆರಾಗಳು ಕಾರ್ಯಾಚರಿಸುತ್ತಿವೆ. ಈ ಎಲ್ಲ ಕ್ಯಾಮೆರಾಗಳನ್ನು ಕುಂದಾಪುರದ ಅಂಕದಕಟ್ಟೆಯಲ್ಲಿರುವ ಕಚೇರಿಯಲ್ಲಿ ಹಗಲು ರಾತ್ರಿ ಲೈವ್ ಮಾನಿಟರಿಂಗ್ ಮಾಡಲಾಗುತ್ತದೆ. ಈ ಪ್ರಾಜೆಕ್ಟ್ ಆರಂಭಗೊಂಡ ಬಳಿಕ ಸಾಕಷ್ಟು ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಬಿದ್ದಿರುವುದಲ್ಲದೇ ಹಲವಷ್ಟು ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ. ಕುಂದಾಪುರ ಉಪವಿಭಾಗದ ಅಂದಿನ ಎಎಸ್ಪಿಯಾಗಿದ್ದ ಹರಿರಾಮ್ ಶಂಕರ್ ಅವರು ಖಾಸಗಿ ಸಹಭಾಗಿತ್ವದಲ್ಲಿ ಸೇಫ್ ಕುಂದಾಪುರ ಪ್ರಾಜೆಕ್ಟ್ ಅನ್ನು ಆರಂಭಿಸಿದ್ದರು.