ಹುಬ್ಬಳ್ಳಿ:
ನಗರದ ಶ್ರೀಸಿದ್ಧಾರೂಢಸ್ವಾಮಿ ಮಠದಿಂದ ಆರಂಭವಾದ ಮೌನ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಇಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡಿತು. ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಕೊಪ್ಪಳ, ಚಿಕ್ಕಮಗಳೂರು ಸೇರಿದಂತೆ 10ಕ್ಕೂ ಅಧಿಕ ಜಿಲ್ಲೆಗಳಿಂದ ಜನರು ಪಾಲ್ಗೊಂಡಿದ್ದರು. ಈ ವೇಳೆ ಮರ್ಯಾದಾ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ಸೇರಿದಂತೆ ಪರಿಹಾರಕ್ಕೆ ಒತ್ತಾಯಿಸಲಾಯಿತು.
ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಆವರಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಆದಿಜಾಂಬವ ಮಠದ ಷಡಕ್ಷರಿ ಮುನಿಗಳು ಮಾತನಾಡಿ, ಈ ಘಟನೆಯಿಂದ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮನುಷ್ಯತ್ವ ಇಲ್ಲದಿರುವವರಿಂದ ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ. ಜಾತಿಯ ಮೌಢ್ಯತೆ ತುಂಬಿಕೊಂಡು ಗರ್ಭಿಣಿಯಾಗಿದ್ದ ತನ್ನ ಮಗಳನ್ನೇ ಹತ್ಯೆ ಮಾಡಿದವನು ತಂದೆಯ ಸ್ಥಾನಕ್ಕೆ ಯೋಗ್ಯವಾದವನಲ್ಲ ಎಂದರು.ಇಂದಿಗೂ ಜನರಲ್ಲಿ ಮೌಢ್ಯ ಸಂಪ್ರದಾಯಗಳನ್ನು ಆಚರಿಸುವುವರಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ. ರಾಕ್ಷಸಿ, ಪೈಶಾಚಿಕ ಮನಸ್ಥಿತಿ ಉಳ್ಳವರು ಮಾತ್ರ ಇಂತಹ ಘೋರ ಕೃತ್ಯಕ್ಕೆ ಕೈಹಾಕುವರು. ಇದನ್ನೆಲ್ಲ ನಿರ್ಮೂಲನೆ ಮಾಡಬೇಕಾದರೆ ಶಿಕ್ಷಣ, ಹೋರಾಟ, ಸಂಘಟನೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.
ಕೊಪ್ಪಳದ ಮರುಳಸಿದ್ದೇಶ್ವರ ಶ್ರೀಗಳು, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.