ನಾಲೆಗಳಲ್ಲಿ ತುಂಬಿದ ಹೂಳು: ಕೊನೇ ಭಾಗಕ್ಕೆ ನೀರು ತಲುಪದೆ ರೈತರಲ್ಲಿ ಆತಂಕ

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಗೆ ನೀರಾವರಿ ಇಲಾಖೆ ಇದುವರೆಗೂ ನೀರು ಹರಿಸಿಲ್ಲ. ಆದರೆ, ರೈತ ಸಮುದಾಯದ ಒತ್ತಾಯದ ಮೇರೆಗೆ ಏಪ್ರಿಲ್ ಎರಡನೇ ವಾರದಲ್ಲಿ ನೀರು ಹರಿಸುವ ಭರವಸೆ ಇಲಾಖೆ ವ್ಯಕ್ತಪಡಿಸಿದೆ. ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳಿಗೆ ಕಟ್ಟು ನೀರು ಪದ್ಧತಿಯಡಿ ಇಲಾಖೆ ನೀರು ಹರಿಸುತ್ತಿದೆ.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹೇಮಾವತಿ ನಾಲೆಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ ಅಡಚಣೆಯಾಗಿರುವುದರಿಂದ ಕೊನೇ ಭಾಗದ ರೈತರಿಗೆ ನೀರು ತಲುಪದೆ ರೈತ ಸಮುದಾಯ ಆತಂಕಕ್ಕೀಡಾಗಿದೆ.

ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಗೆ ನೀರಾವರಿ ಇಲಾಖೆ ಇದುವರೆಗೂ ನೀರು ಹರಿಸಿಲ್ಲ. ಆದರೆ, ರೈತ ಸಮುದಾಯದ ಒತ್ತಾಯದ ಮೇರೆಗೆ ಏಪ್ರಿಲ್ ಎರಡನೇ ವಾರದಲ್ಲಿ ನೀರು ಹರಿಸುವ ಭರವಸೆ ಇಲಾಖೆ ವ್ಯಕ್ತಪಡಿಸಿದೆ.

ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳಿಗೆ ಕಟ್ಟು ನೀರು ಪದ್ಧತಿಯಡಿ ಇಲಾಖೆ ನೀರು ಹರಿಸುತ್ತಿದೆ. ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯ ನಾಲೆಗಳಲ್ಲಿ ರೈತರು ಈಗಾಗಲೇ ಭತ್ತದ ನಾಟಿ ಮಾಡುತ್ತಿದ್ದು, ಬೆಳೆದು ನಿಂತಿರುವ ಕಬ್ಬು, ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳು ನಾಲಾ ನೀರನ್ನು ಅವಲಂಭಿಸಿವೆ.

2010 ರಂದು ಅಂದಿನ ಶಾಸಕ ಕೆ.ಬಿ.ಚಂದ್ರಶೇಖರ್ 250 ಕೋಟಿ ರು. ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಮಾಡಿಸಿ ಕೊನೇ ಭಾಗದ ರೈತನಿಗೂ ಸುಲಲಿತವಾಗಿ ನೀರು ತಲುಪುವಂತೆ ಮಾಡಿದ್ದರು. ನಂತರ ನೀರಾವರಿ ಇಲಾಖೆ ಸಮರ್ಪಕವಾಗಿ ನಾಲೆಗಳನ್ನು ನಿರ್ವಹಣೆ ಮಾಡದ ಪರಿಣಾಮ ಹೂಳು ತುಂಬಿ ನಾಲಾ ಏರಿಗಳ ಮೇಲೆ ಗಿಡಗೆಂಟೆಗಳು ಬೆಳೆದು ರೈತರ ಸಂಚಾರಕ್ಕೆ ತೀವ್ರ ಅಡಚಣೆಯಿದೆ.

ನಾಲೆ ಕೊನೇ ಭಾಗಕ್ಕೆ ಸುಲಲಿತವಾಗಿ ನೀರು ಹರಿಯಲು ತುಂಬಿರುವ ಹೂಳೆತ್ತಬೇಕು. ರಾಜ್ಯ ಸರ್ಕಾರ ಹೇಮಾವತಿ ಜಲಾನಯನ ಪ್ರದೇಶದ ವ್ಯಾಪ್ತಿ ನಾಲೆಗಳ ಹೂಳು ಮತ್ತು ನಾಲಾ ಏರಿಯ ಮೇಲಿನ ಜಂಗಲ್ ಕಟ್ಟಿಂಗ್ ಮಾಡಲು ಸುಮಾರು 1.5 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ನಾಲೆಯಲ್ಲಿ ನೀರು ನಿಲ್ಲಿಸಿದಾಗ ಕಾಮಗಾರಿ ಮಾಡಬೇಕಾಗಿತ್ತು. ಆದರೆ, ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಲೆಯಲ್ಲಿ ನೀರು ಹರಿಯುತ್ತಿದ್ದ ವೇಳೆ 15 ಪ್ಯಾಕೇಜ್ ಮಾಡಿ ನಾಲೆಗಳಲ್ಲಿ ಹೂಳೆತ್ತುವ ಮತ್ತು ಜಂಗಲ್ ಕಟ್ಟಿಂಗ್ ಮಾಡುವ ನಾಟಕ ಮಾಡಿ ಕೋಟ್ಯಂತರ ರು. ಹಣ ದುರ್ಬಳಕೆ ಮಾಡಲಾಗಿದೆ ಎಂದು ರೈತ ಸಂಘ ಆರೋಪಿಸಿದೆ.

ನದಿ ಅಣೆಕಟ್ಟೆ ನಾಲೆಗಳ ಕೊನೆ ಭಾಗದ ನೀರು ಹರಿಯದ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಹೊಸ ಬೆಳೆ ಹಾಗೂ ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲಾರದ ಪರಿಸ್ಥಿತಿಗೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ನಾಲೆಗಳ ಹೂಳು ತೆಗೆಸಿ ಕೊನೆ ಭಾಗದ ರೈತರಿಗೆ ನೀರೊದಗಿಸಬೇಕಿಸಬೇಕಿದೆ.ನಾಲೆಗಳಲ್ಲಿ ನೀರು ಹರಿಯುತ್ತಿರುವ ವೇಳೆ ಹೂಳು ತೆಗೆಸುವಂತೆ ನಾಟಕ ಕೇವಲ ಕಾಗದದ ಮೇಲೆ ಮಾಡಿ ಅಧಿಕಾರಿಗಳು ಹಣವನ್ನು ಹಗಲು ದರೋಡೆ ಮಾಡಿದ್ದಾರೆ. ನೀರಾವರಿ ಇಲಾಖೆಯಲ್ಲಿನ ಭ್ರಷ್ಟಚಾರದ ರೈತಸಂಘ ಬಹಿರಂಗ ಹೋರಾಟ ಮಾಡುತ್ತಿದ್ದರೂ ಸರ್ಕಾರ ಇಂಜಿನಿಯರ್ ಗಳ ರಕ್ಷಣೆ ಮಾಡುತ್ತಿದೆ. ಈ ಬಗ್ಗೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

- ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ

Share this article