ಹೂಳು ತುಂಬಿಕೊಂಡ ಗಜೇಂದ್ರಗಡ ಕೆರೆಗಳು

KannadaprabhaNewsNetwork | Published : Apr 28, 2025 11:48 PM

ಸಾರಾಂಶ

ಗಜೇಂದ್ರಗಡ ತಾಲೂಕಿನಲ್ಲಿ ಕೃಷಿ ಚಟುವಟಿಕೆ ನಡೆಸಲು ರೈತರು ಒಣ ಬೇಸಾಯ ಹಾಗೂ ಕೊಳವೆ ಬಾವಿ ನೀರಿನಿಂದ ನೀರಾವರಿ ಮಾಡುತ್ತಿದ್ದಾರೆ. ಕೊಳವೆ ಬಾವಿಗಳಿಗೆ ಜಲ ಮರುಪೂರಣ ಹಾಗೂ ಮಳೆಗಾಲದಲ್ಲಿ ಮಳೆ ನೀರನ್ನೂ ಸಂಗ್ರಹಿಸಿಟ್ಟುಕೊಳ್ಳದಷ್ಟು ಹೂಳು ತುಂಬಿಕೊಂಡು, ಕೆರೆಗಳು ಜಾಲಿ ಕಂಟಿಗಳ ಗೂಡಾಗಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ.

ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ತಾಲೂಕಿನಲ್ಲಿ ಕೃಷಿ ಚಟುವಟಿಕೆ ನಡೆಸಲು ರೈತರು ಒಣ ಬೇಸಾಯ ಹಾಗೂ ಕೊಳವೆ ಬಾವಿ ನೀರಿನಿಂದ ನೀರಾವರಿ ಮಾಡುತ್ತಿದ್ದಾರೆ.

ಕೊಳವೆ ಬಾವಿಗಳಿಗೆ ಜಲ ಮರುಪೂರಣ ಹಾಗೂ ಮಳೆಗಾಲದಲ್ಲಿ ಮಳೆ ನೀರನ್ನೂ ಸಂಗ್ರಹಿಸಿಟ್ಟುಕೊಳ್ಳದಷ್ಟು ಹೂಳು ತುಂಬಿಕೊಂಡು, ಕೆರೆಗಳು ಜಾಲಿ ಕಂಟಿಗಳ ಗೂಡಾಗಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ.

ತಾಲೂಕಿನ ಗಜೇಂದ್ರಗಡದ ಇಂಗು ಕೆರೆ, ಬೆಣಸಮಟ್ಟಿ ಕೆರೆ, ನಾಗೇಂದ್ರಗಡ ಕೆರೆ, ಜಿಗೇರಿ ಕೆರೆ ಬೃಹತ್‌ ಕೆರೆಗಳಾಗಿವೆ. ಕುಂಟೋಜಿಯ ಕೊಳ್ಳದ ಕೆರೆ, ವದೇಗೋಳದ ಕೆರೆಗಳು ಗುಡ್ಡದ ಅಡಿಯಲ್ಲಿದ್ದು, ಮಳೆಗಾಲದಲ್ಲಿ ಗುಡ್ಡದಿಂದ ಹರಿದು ಬರುವ ನೀರು ಈ ಕೆರೆಗಳಿಗೆ ಜಲ ಮೂಲವಾಗಿದೆ.

ಈ ಕೆರೆಗಳು ತುಂಬಿದರೆ ಸುತ್ತಲಿನ ಗ್ರಾಮಗಳಲ್ಲಿರುವ ಕೊಳವೆ ಬಾವಿಗಳು ಮರುಪೂರಣಗೊಳ್ಳುತ್ತವೆ. ಆದರೆ ಈ ಕೆರೆಗಳಲ್ಲಿ ಹಲವು ದಶಕಗಳಿಂದ ಹೂಳು ತುಂಬಿಕೊಂಡು, ಮುಳ್ಳು ಕಂಟಿಗಳು ಬೆಳೆದಿವೆ. ಅಲ್ಲದೆ ನಾಗರಸಕೊಪ್ಪ ಕೆರೆ, ಮ್ಯಾಕಲಝರಿ ಕೆರೆ ಸೇರಿದಂತೆ ಹಲವು ಕೆರೆಗಳು ಕಾಯಕಲ್ಪವಿಲ್ಲದೆ ಹೂಳು ತುಂಬಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಕೆರೆಯ ಒಡ್ಡಿನ ಮೇಲೆ ಬೆಳೆದಿರುವ ಮುಳ್ಳು ಕಂಟಿಗಳಿಂದ ಮಳೆಗಾಲದಲ್ಲಿ ಕೆರೆಯಲ್ಲಿ ಸಂಗ್ರಹವಾಗುವ ನೀರು ಮುಳ್ಳು ಕಂಟಿ ಬೇರುಗಳ ಮೂಲಕ ಹರಿದು ನೀರು ಪೋಲಾಗುವ ಅಪಾಯವಿದೆ.

ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿದ್ದು, ಜನರು ಜಲ ಮೂಲಗಳಾದ ಹಳ್ಳ, ಕಲ್ಯಾಣಿ, ಕೆರೆಗಳ ಹೂಳು ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಗಜೇಂದ್ರಗಡ ಹಾಗೂ ಸುತ್ತಲಿನ ಕೆರೆಗಳಿಗೆ ಮಾತ್ರ ಹೂಳೆತ್ತುವ ಭಾಗ್ಯ ದೊರೆಯುತ್ತಿಲ್ಲ. ಒಂದೂವರೆ ದಶಕದ ಹಿಂದೆ ಜಿಗೇರಿ ಕೆರೆಯಲ್ಲಿ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆಯ ಹೂಳೆತ್ತಿ ತಮ್ಮ ಹೊಲಗಳಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದರು. ಆದರೆ ಕೆಲವರು ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಆ ಕಾರ್ಯ ಅಲ್ಲಿಗೆ ನಿಂತಿತು. ಇನ್ನಾದರೂ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಿ ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವ ಕೆಲಸ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.ವರದಾನವಾಗುತ್ತಿರುವ ಕೃಷಿಹೊಂಡಸಸ್ಯ ಸಂಕುಲ ಪ್ರಾಣಿ ಸಂಕುಲದ ಉಳಿವಿಗಾಗಿ ಜೀವಜಲ ಸಂಪತ್ತನ್ನು ಸಂರಕ್ಷಣೆ ಮಾಡಬೇಕೆಂಬ ಕಲ್ಪನೆ ಎಲ್ಲರಲ್ಲೂ ಮೂಡುತ್ತಿದೆ. ಅದು ಇಂದಿನ ಪರಿಸ್ಥಿತಿಗೆ ಅನಿವಾರ್ಯವೂ ಆಗಿದೆ. ಮಳೆಗಾಲದಲ್ಲಿ ಬಿದ್ದ ಮಳೆ ನೀರನ್ನು ಪೋಲಾಗಿ ಹರಿದು ಹೋಗದಂತೆ ಭೂಮಿಯಲ್ಲಿ ಇಂಗಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆ ಮೂಲಕ ಚೆಕ್ ಡ್ಯಾಂ, ಹಳ್ಳ, ಕೆರೆಗಳ ಹೂಳೆತ್ತುವುದು, ಬದು ನಿರ್ಮಾಣ, ಇಂಗು ಗುಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸುವುದರ ಮೂಲಕ ಮಳೆಯಾದರೆ ಅಪಾರ ಪ್ರಮಾಣದ ಜಲರಾಶಿಯನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಅಮೃತ ಸರೋವರ ಯೋಜನೆಗಳ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸಗಳು ನಡೆಯುತ್ತಿವೆ. ಆದರೆ ಬಹುತೇಕ ಕಾಮಗಾರಿಗಳು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನೆಪ ಮಾತ್ರಕ್ಕೆ ನಡೆಯುತ್ತಿವೆ. ಯೋಜನೆಗಳ ಉದ್ದೇಶ ಈಡೇರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರೈತರಿಗೆ ವರವಾದ ಕೃಷಿ ಹೊಂಡ

ಸಮರ್ಪಕ ಮಳೆಯಾಗದ ಸಂದರ್ಭದಲ್ಲಿ ಬೆಳೆ ಬರದೆ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಕಳೆದ ನಾಲ್ಕೆದು ವರ್ಷಗಳ ಹಿಂದೆ ಕೃಷಿ ಇಲಾಖೆಯಿಂದ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ವರದಾನವಾಗಿವೆ. ಮುಂಗಾರು, ಹಿಂಗಾರಿನಲ್ಲಿ ಬೆಳೆಗಳು ಬೆಳೆದು ನಿಂತಾಗ ಮಳೆಯಾಗದಿದ್ದಾಗ ರೈತರು ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನು ಆಯಿಲ್ ಇಂಜಿನ್ ಮೂಲಕ ಬೆಳೆಗಳಿಗೆ ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದು, ಇಳುವರಿ ಕುಂಠಿತವಾಗುವುದು ತಪ್ಪುತ್ತಿದೆ. ರೈತರು ತಮ್ಮ ಎರಿ (ಕಪ್ಪು) ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ಮಳೆ ಕೈಕೊಟ್ಟಾಗ ಬೆಳೆಗಳಿಗೆ ನೀರುಣಿಸುವುದುರ ಜೊತೆಗೆ ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಪ್ಪಿಸುತ್ತಿವೆ. "ಕೃಷ್ಣಾ ಬಿ ಸ್ಕೀಂ ಯೋಜನೆ ಅಡಿಯಲ್ಲಿ ರು. ೧೧೨ ಕೋಟಿ ವೆಚ್ಚದಲ್ಲಿ ಗಜೇಂದ್ರಗಡ ಭಾಗದ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಗಜೇಂದ್ರಗಡ ತಾಲೂಕಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಅಂದಾಜು ರು. ೪೦ ಕೋಟಿ ವೆಚ್ಚದಲ್ಲಿ ನರೇಗಲ್ ಭಾಗದ ತೋಟಗಂಟಿ, ಕೋಚಲಾಪುರ, ಅಬ್ಬಿಗೇರಿ ಭಾಗದ ಕೆರೆಗಳಿಗೆ ಮಲಪ್ರಭಾ ನದಿ ನೀರನ್ನು ಕಾಲುವೆ ಮೂಲಕ ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

"ಕಳಕಪ್ಪ ಬಂಡಿ ಅವರ ಅವಧಿಯಲ್ಲಿ ೨೧ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ದೊರೆತಿದೆ. ಗಜೇಂದ್ರಗಡ ಭಾಗದ ರೈತರ ಕಲ್ಯಾಣಕ್ಕಾಗಿ ಈ ಹಿಂದೆ ಕಳಕಪ್ಪ ಬಂಡಿ ಅವರು ಶಾಸಕರಾಗಿದ್ದಾಗ ಕೃಷ್ಣಾ ಬಿ ಸ್ಕೀಂ ಯೋಜನೆ ಅಡಿಯಲ್ಲಿ ಅಂದಾಜು ೨೫೦ ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ೨೧ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರಮನ್‌ ಅಶೋಕ ವನ್ನಾಲ ಹೇಳಿದರು.

ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ, ಮ್ಯಾಕಲಝರಿ, ಹಾಲಕೆರೆ, ನಾಗರಸಕೊಪ್ಪ, ಸರ್ಜಾಪುರ, ಮಾಟರಂಗಿ ಸೇರಿದಂತೆ ಹಲವು ಕೆರೆಗಳನ್ನು ಅಮೃತ ಸರೋವರ ಯೋಜನೆ ಮೂಲಕ ಕೆರೆ ಅಂಗಳ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗಜೇಂದ್ರಗಡ ಸಹಾಯಕ ನಿರ್ದೇಶಕ (ಪಂ.ಇ) ಬಸವರಾಜ ಬಡಿಗೇರ ಹೇಳಿದರು.

Share this article