ನಿರ್ವಹಣೆ ಇಲ್ಲದೆ ಹೂಳು ತುಂಬಿದ ಜಲಾಶಯ

KannadaprabhaNewsNetwork |  
Published : Jun 08, 2026, 03:30 AM IST
ಮುಂಡಗೋಡ: ಪ್ರಸಕ್ತ ಸಾಲಿನ ಮುಂಗಾರು ಪ್ರವೇಶ ಸನ್ನಿಹಿತವಾಗಿದ್ದರೂ ಇದುವರೆಗೂ ಯಾವುದೇ ಜಲಾಶಯಗಳಲ್ಲಿ ಮಳೆಗಾಲ ಪೂರ್ವ ಸಿದ್ದತಾ ಕಾಮಗಾರಿ ಕೈಗೊಳ್ಳದಿರುವುದು ರೈತ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.  | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಮುಂಗಾರು ಪ್ರವೇಶವಾಗಿದ್ದರೂ ಇದುವರೆಗೂ ಯಾವುದೇ ಜಲಾಶಯಗಳಲ್ಲಿ ಮಳೆಗಾಲದ ಪೂರ್ವಸಿದ್ಧತಾ ಕಾಮಗಾರಿ ಕೈಗೊಳ್ಳದಿರುವುದು ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗಾಲದ ಪೂರ್ವಸಿದ್ಧತಾ ಕಾಮಗಾರಿ ಇಲ್ಲ । ರೈತರು, ಸಾರ್ವಜನಿಕರ ಆಕ್ರೋಶಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಪ್ರಸಕ್ತ ಸಾಲಿನ ಮುಂಗಾರು ಪ್ರವೇಶವಾಗಿದ್ದರೂ ಇದುವರೆಗೂ ಯಾವುದೇ ಜಲಾಶಯಗಳಲ್ಲಿ ಮಳೆಗಾಲದ ಪೂರ್ವಸಿದ್ಧತಾ ಕಾಮಗಾರಿ ಕೈಗೊಳ್ಳದಿರುವುದು ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ೯ ಜಲಾಶಯ ಹಾಗೂ ೨೦ಕ್ಕೂ ಅಧಿಕ ದೊಡ್ಡ ಕೆರೆಗಳಿವೆ. ಇಷ್ಟೊಂದು ಕೆರೆ, ಜಲಾಶಯಗಳಿದ್ದರೂ ಇಲಾಖೆಯಿಂದ ಯಾವೊಂದು ಕೆರೆಗಳಲ್ಲಿ ಕೂಡ ಹೂಳೆತ್ತುವುದಾಗಲಿ ಅಥವಾ ಮಳೆಗಾಲ ಪೂರ್ವ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿಲ್ಲ. ಬಹುತೇಕ ಜಲಾಶಯ ಮತ್ತು ಕೆರೆಗಳು ಹೂಳು ತುಂಬಿಕೊಂಡಿವೆ. ಮಳೆ ಬಂದರೂ ಸಮರ್ಪಕ ನೀರು ಸಂಗ್ರಹವಾಗದಂತಹ ಸ್ಥಿತಿಗೆ ತಲುಪಿವೆ. ಜಲಾಶಯಗಳ ಒಡ್ಡಿನ ಮೇಲೆ ಸಂಪೂರ್ಣ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಕೇಳುವವರು ಇಲ್ಲದಂತಾಗಿದೆ.

ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಾಗಿ ಕೆಲವು ವರ್ಷಗಳಿಂದ ಡ್ಯಾಂಗಳಿಗೆ ನಿರ್ವಹಣೆ ಮಾಡಿಸಿಕೊಳ್ಳುವ ಭಾಗ್ಯವೇ ಬಂದಿಲ್ಲ. ಚೆಕ್ ಡ್ಯಾಂ, ಬಾಂದಾರ, ಜಲಾಶಯ ಕಾಲುವೆ ನಿರ್ವಹಣೆ ಮುಂತಾದ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುವ ಇಲಾಖೆ, ಕೆರೆಗಳ ನಿರ್ವಹಣೆ ಮಾಡದೆ ಇರುವುದು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎತ್ತಿ ತೋರುತ್ತದೆ.

ಜಲಾಶಯಗಳು ದುರ್ಬಲ, ಆತಂಕ:

ಇಲ್ಲಿಯ ಬಹುತೇಕ ಜಲಾಶಯಗಳು ನಿರ್ವಹಣೆ ಇಲ್ಲದೆ ದುರ್ಬಲವಾಗಿದ್ದು, ರೈತರು ತೀವ್ರ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜಲಾಶಯ ಕೆರೆಗಳನ್ನು ಹೊಂದಿರುವ ತಾಲೂಕಿನ ಬಾಚಣಕಿ, ಹಾಗೂ ಧರ್ಮಾ ಜಲಾಶಯ ಹೊರತುಪಡಿಸಿ ಇನ್ನುಳಿದ ಯಾವುದೇ ಜಲಾಶಯಗಳು ಕೂಡ ಸುಭದ್ರವಾಗಿಲ್ಲ. ಆಗಾಗ ಜಲಾಶಯಗಳ ಒಡ್ಡಿನಲ್ಲಿ ಡೊಂಬು ಕಾಣಿಸಿಕೊಂಡು ನೀರು ಪೋಲಾಗುತ್ತದೆ. ಚಿಗಳ್ಳಿ, ನ್ಯಾಸರ್ಗಿ, ಅರಶಿಣಗೇರಿ ಹಾಗೂ ಸನವಳ್ಳಿ ಜಲಾಶಯಗಳಗಳು ದುರ್ಬಲಗೊಂಡು ದುರಸ್ತಿ ಕಂಡಿವೆ. ಇಲಾಖೆಯಿಂದ ಕೇವಲ ತಾತ್ಕಾಲಿಕ ಮಣ್ಣು ಹಾಕಿ ಡೊಂಬು ಮುಚ್ಚುವ ಕ್ರಮ ಕೈಗೊಳ್ಳಲಾಗಿದೆ ವಿನಃ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾರೂ ಮುಂದಾಗಿಲ್ಲ. ಇದರಿಂದಾಗಿ ಇಲ್ಲಿಯ ಜಲಾಶಯಗಳಲ್ಲಿ ಮತ್ತೆ ಮತ್ತೆ ಡೊಂಬುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಭಾರೀ ಮಳೆಯಾಗಿ ಜಲಾಶಯಗಳು ಬರ್ತಿಯಾದರೆ ಯಾವ ಸಮಯದಲ್ಲಿ ಏನು ಅನಾಹುತ ಸಂಬವಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಲ್ಲಿ ಇಷ್ಟೊಂದು ಜಲಾಶಯ ಕೆರೆಗಳಿದ್ದರೂ ರೈತರಿಗೆ ಉಪಯೋಗವಾಗುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ರೈತರು ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡುತ್ತಾರೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಜಲಾಶಯದ ಸುಭದ್ರತೆ ಹಾಗೂ ಮಳೆಗಾಲ ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಹೆಸರಿಗೆ ಮಾತ್ರ ಕಚೇರಿ

ಮುಂಡಗೋಡ ಚಿಕ್ಕ ನೀರಾವರಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಹೊರತುಪಡಿಸಿ ಸಂಬಂಧಿಸಿದ ಮುಖ್ಯ ಎಂಜಿನಿಯರ್‌ಗಳಾರೂ ಇರುವುದೇ ಇಲ್ಲ. ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಳ್ಳೋಣ ಎಂದು ಬಂದರೆ ಅಧಿಕಾರಿಗಳು ಸಿಗದೇ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳುವಂತಾಗಿದೆ ಎನ್ನುವುದು ರೈತರ ಆರೋಪವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಸಲಕರಣೆಗಳ ಹಸ್ತಾಂತರ
ಘನತ್ಯಾಜ್ಯ 2026ರ ನಿಯಮ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ