ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದಂಡ ಕಪ್ ಹಾಕಿ ಹಬ್ಬದ ಅಧ್ಯಕ್ಷ ರಶಿನ್ ಸುಬ್ಬಯ್ಯ, ಮುದ್ದಂಡ ಒಕ್ಕದ ಪಟ್ಟೆದಾರ ಮುದ್ದಂಡ ಡಾಲಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರಂಭ ನಡೆಯಲಿದೆ ಎಂದರು.
ವಿರಾಜಪೇಟೆ ಶಾಸಕ ಅಜ್ಜಿಕುಟೀರ ಎಸ್.ಪೊನ್ನಣ್ಣ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ,ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಉಪಸ್ಥಿತರಿರುವರು ಎಂದು ತಿಳಿಸಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎರಡು ಮೈದಾನ ಮತ್ತು ಪೊಲೀಸ್ ಮೈದಾನದಲ್ಲಿ ನಡೆಯಲಿರುವ ಮುದ್ದಂಡ ಕಪ್ ಹಾಕಿ ಉತ್ಸವ ಮಾ. 28 ರಂದು ಉದ್ಘಾಟನೆಗೊಳ್ಳಲಿದೆ. ಏ.29ರಂದು ಸಮಾರೋಪಗೊಳ್ಳಲಿದೆ. ಪಂದ್ಯಾವಳಿಗೆ ಸುಮಾರು 2.50 ಕೋಟಿ ರು. ಖರ್ಚಾಗುತ್ತಿದೆ ಎಂದರು.
ಈ ಬಾರಿ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ಕೂಡ ನಡೆಯಲಿದೆ. ಸುಮಾರು 50-80 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಕಿ ಹಬ್ಬದ ಕೊನೆಯ 12 ದಿನಗಳ ಕಾಲ ಮಹಿಳಾ ಹಾಕಿ ನಡೆಯಲಿದೆ ಎಂದರು.
ಹಾಕಿ ಉತ್ಸವದ ಕಾರ್ಯದರ್ಶಿ ಮುದ್ದಂಡ ರಂಜಿತ್ ಪೊನ್ನಪ್ಪ ಮಾತನಾಡಿ, ಜ.12 ರಿಂದ ತಂಡಗಳ ನೊಂದಾಣಿ ಆರಂಭಗೊಳ್ಳಲಿದೆ. ಈಗಾಗಲೇ 500 ಕೊಡವ ಕುಟುಂಬಗಳು ಸಂಪರ್ಕದಲ್ಲಿದ್ದು, 400ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮೊದಲೇ ಅನುದಾನ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಕೊಡವ ಹಾಕಿ ಅಕಾಡೆಮಿ ‘ಮುದ್ದಂಡ ಹಾಕಿ ಉತ್ಸವ’ಕ್ಕೆ ಎಲ್ಲಾ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.