ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿದ ಕೀರ್ತಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ತಿಳಿಸಿದರು.ವೀ.ವಿ. ಸಂಘದ ಹರಗಿನದೋಣಿ ಬಸವನಗೌಡ ಸಂಯುಕ್ತ ಪ.ಪೂ. ಕಾಲೇಜಿನ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ವೀ.ವಿ. ಸಂಘದಡಿಯ ವಿವಿಧ ಶಾಲಾ- ಕಾಲೇಜುಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಪ್ರಪಂಚಾದ್ಯಂತ ಇದ್ದಾರೆ.ನಮ್ಮ ತಂದೆ, ನಾನು, ನಮ್ಮ ಅಕ್ಕ, ನಮ್ಮ ಇಡೀ ಕುಟುಂಬ ಸದಸ್ಯರು ಸಹ ವೀವಿ ಸಂಘದ ಶಾಲೆಗಳಲ್ಲಿ ಓದಿದ್ದೇವೆ. ನೂರು ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿರುವ ವೀವಿ ಸಂಘ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ ಎಂದರಲ್ಲದೆ, ಬೆಳಗಾವಿಯ ಕೆಎಲ್ಇ ಸಂಸ್ಥೆಯಂತೆ ವೀವಿ ಸಂಘವು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಂಡೂರು ಶಾಸಕ ಈ. ತುಕಾರಾಂ ಅವರು ವೀರಶೈವ ವಿದ್ಯಾವರ್ಧಕ ಸಂಘ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ಸಂಘದ ಪದವಿ ಕಾಲೇಜಿಗೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ವೀವಿ ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ ಮಾತನಾಡಿ, ಗಡಿ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ವಂಚಿತರಾಗಬಾರದು ಎಂದು ಆಶಯದಿಂದ ಸಮುದಾಯದ ಗುರು- ಹಿರಿಯರು ದಾನ-ಧರ್ಮಾದಿಗಳನ್ನು ಮಾಡಿ, ಹತ್ತಾರು ಶಾಲಾ- ಕಾಲೇಜುಗಳನ್ನು ತೆರೆದರು ಎಂದು ಸ್ಮರಿಸಿದರು.
ವೀ.ವಿ. ಸಂಘದ ಅಧ್ಯಕ್ಷ ರಾಮನಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದಕೊಟ್ಟೂರು ಬಸವಲಿಂಗ ಸ್ವಾಮಿಗಳು ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷ ಏಳುಬೆಂಚಿ ರಾಜಶೇಖರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹರಗಿನದೋಣಿ ಮಹಾರುದ್ರಗೌಡ, ಪಲ್ಲೇದ ಪಂಪಾಪತೆಪ್ಪ, ವೀವಿ ಸಂಘದ ಕಾರ‍್ಯಕಾರಿ ಮಂಡಳಿಯ ಸದಸ್ಯರಾದ ಬಿ.ವಿ. ಬಸವರಾಜ, ಜಾನೆಕುಂಟೆ ಸಣ್ಣ ಬಸವರಾಜ, ದರೂರು ಶಾಂತವೀರನಗೌಡ, ಅಸುಂಡಿ ನಾಗರಾಜ, ಎಚ್.ಎಂ. ಕಿರಣಕುಮಾರ್ , ಸಿದ್ಧರಾಮ ಕಲ್ಮಠ, ಟಿ. ವಿರುಪಾಕ್ಷಗೌಡ, ಆಡಳಿತ ಮಂಡಳಿಯ ಸದಸ್ಯರಾದ ಗುಡ್ಡದಕಲ್ಲು ವೀರನಗೌಡ, ಗೋಟೂರು ಸಣ್ಣ ಜಂಭಣ್ಣ ಗಾಳಿ ಏಕಾಂಬ್ರಪ್ಪ, ಪಲ್ಲೇದ ನಾಗರಾಜ, ಬಿ.ಎಚ್. ಬಂಡೇಗೌಡ, ಕಾರೆ ಗವಿಸಿದ್ದಪ್ಪ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.ತೇಜಶ್ವಿನಿ ಪಾಟೀಲ್ ಹಾಗೂ ಕು. ಸಿಂಚನ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಬಸವ ಗವಾಯಿ ಸುಗಮ ಸಂಗೀತ ನಡೆಸಿಕೊಟ್ಟರು. ವೀ.ವಿ, ಸಂಘದಲ್ಲಿ ಸೇವೆ ಸಲ್ಲಿಸಿದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹರಗಿನದೋಣಿ ಶ್ರೀಗಳು ಆಶೀರ್ವಚನ ನೀಡಿದರು.