ಸರಳ ಸಾಮೂಹಿಕ ವಿವಾಹಗಳು ಮಾದರಿ: ಎಸ್ಸೆಸ್‌

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ಸರಳ ಸಾಮೂಹಿಕ ವಿವಾಹಗಳು ಮಾದರಿ: ಎಸ್ಸೆಸ್‌ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಸಹಯೋಗದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ
ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಸಹಯೋಗದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ದಾವಣಗೆರೆ ಅದ್ಧೂರಿ, ಆಡಂಬರದ ಮದುವೆಗಿಂತ ಸಾಮೂಹಿಕ ವಿವಾಹವಾಗುವುದು ಉತ್ತಮ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷರು, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಬುಧವಾರ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಸಹಯೋಗದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರಿಗೆ ಶುಭಾಷಯ ಕೋರಿ ಮಾತನಾಡಿದ ಅವರು, ನಿಮ್ಮ ಬಾಳು ಬಂಗಾರವಾಗಲಿ, ನೀವು ಅನ್ಯೋನ್ಯವಾಗಿ ಸುಖ ಸಂತೋಷದಿಂದ ನೂರ್ಕಾಲ ಬಾಳಿರಿ ಎಂದು ಹಾರೈಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದು 14 ಜೋಡಿಗಳು ವಿವಾಹ ವಾಗುತ್ತಿರುವುದು ಸಂತೋಷದ ವಿಷಯ. ಸಂಸಾರ ಎಂದರೆ ಜೋಡೆತ್ತಿನ ಬಂಡಿ ಇದ್ದಂತೆ. ಒಬ್ಬರಿಗೊಬ್ಬರು ಅನುಸರಿಸಿಕೊಂಡು ಜೀವನ ಸಾಗಿಸಬೇಕು. ಅದ್ಧೂರಿ ಆಡಂಬರದ ಮದುವೆಗಿಂತ ಇಂತಹ ಅಮ್ಮನ ಸನ್ನಿಧಾನದಲ್ಲಿ ಸರಳವಾಗಿ ಸಾಮೂಹಿಕ ವಿವಾಹವಾಗುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು. ಇಂತಹ ಮದುವೆಗಳು ಬಡವರಿಗೆ ಅನುಕೂಲವಾಗಲಿವೆ. ನೂತನ ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದ ನೀವು ನಿಮ್ಮ ಜೀವನದಲ್ಲಿ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಜೀವನ ನಡೆಸಿ ಉತ್ತಮ ಮಕ್ಕಳನ್ನು ಹೆತ್ತು ದೇಶದ ಸತ್ಪ್ರಜೆಗಳನ್ನಾಗಿ ಮಾಡಿರಿ ಎಂದು ತಿಳಿಸಿದರು. ಟ್ರಸ್ಟ್‌ನ ಧರ್ಮದರ್ಶಿ ಗೌಡರ ಚನ್ನಬಸಪ್ಪ ಮಾತನಾಡಿ, ನಮ್ಮ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪನವರ ಮಾರ್ಗದರ್ಶನದಂತೆ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಅಂಗವಾಗಿ ಸಾಮೂಹಿಕ ಸರ್ವಧರ್ಮೀಯರ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ನವರಾತ್ರಿ ಅಂಗವಾಗಿ 9 ದಿನ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿವಿಧ ರೀತಿಯ ಅಲಂಕಾರಗಳನ್ನು ಮಾಡುತ್ತಾ ಬಂದಿದ್ದೇವೆ. ಈ ನಾಡ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದೇವೆ. ಹಾಗೆಯೇ ಇಂದು ಕಳಸದ ಪೂಜೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾಮೂಹಿಕ ವಿವಾಹ ಕಾರ್ಯಕ್ರಮದ ನಂತರದಲ್ಲಿ ಮೆರವಣಿಗೆ ಹಾಗೂ ದಿವಂಗತ ಪಾರ್ವತಮ್ಮನವರ ಜ್ಞಾಪಕಾರ್ಥವಾಗಿ ಡಾ.ಶಾಮನೂರು ಶಿವಶಂಕರಪ್ಪ, ಅವರ ಕುಟುಂಬದವರಿಂದ ಎಲ್ಲರಿಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು. ದಾನಿಗಳಾದ ಗಣೇಶ ಡಿ.ಶೇಟ್ ದಂಪತಿಗಳು ಹಾಗೂ ನವರಾತ್ರಿ ಅಂಗವಾಗಿ ಪುರಾಣ ಪ್ರವಚನ ನೆರವೇರಿಸಿದ ರೇವಣಸಿದ್ದಯ್ಯ ಶಾಸ್ತ್ರಿ, ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಎಚ್.ಬಿ. ಗೋಣೆಪ್ಪ, ಉಮೇಶ ಸಾಳಂಕಿ, ಎಲ್.ಡಿ. ಗೋಣೆಪ್ಪ, ಮುದೇಗೌಡ್ರ ವಿಶ್ವನಾಥ, ಎಸ್.ಎಲ್. ಗುರುರಾಜ, ಹನುಮಂತರಾವ್ ಜಾಧವ್, ಹನುಮಂತರಾವ್ ಸಾವಂತ್, ಗೌಡರ ರಾಮಚಂದ್ರಪ್ಪ, ಕವಿರಾಜ್, ಗಣೇಶ, ಆನಂದ ಸೇರಿದಂತೆ ಇತರರು ಭಾಗವಹಿಸಿದ್ದರು. - - - ಫೋಟೋ ಬರಲಿವೆ

Share this article