ಗಣಪತಿ ಪ್ರತಿಷ್ಠಾಪನೆಗೆ ಇರುವ ನಿಯಮ ಸರಳೀಕರಿಸಿ: ಸುರೇಶ್ ಬಾಬು

KannadaprabhaNewsNetwork |  
Published : Aug 24, 2025, 02:00 AM IST
ಪೋಟೋ: 23ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಸುರೇಶ್ ಬಾಬು ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗಾಗಿ ಇರುವ ನಿಯಮಗಳನ್ನು ಸರಳೀಕರಣಗೊಳಿಸಬೇಕು ಮತ್ತು ಗಣಪತಿ ಹಬ್ಬಕ್ಕಾಗಿ ಹಾಕುತ್ತಿರುವ ಫ್ಲೆಕ್ಸ್‌ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ವಿಶ್ವ ಹಿಂದೂ ಪರಿಷತ್‌ನ ಸುರೇಶ್ ಬಾಬು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗಾಗಿ ಇರುವ ನಿಯಮಗಳನ್ನು ಸರಳೀಕರಣಗೊಳಿಸಬೇಕು ಮತ್ತು ಗಣಪತಿ ಹಬ್ಬಕ್ಕಾಗಿ ಹಾಕುತ್ತಿರುವ ಫ್ಲೆಕ್ಸ್‌ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ವಿಶ್ವ ಹಿಂದೂ ಪರಿಷತ್‌ನ ಸುರೇಶ್ ಬಾಬು ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಸುಮಾರು 645ಕ್ಕೂ ಹೆಚ್ಚು ಗಣಪತಿ ಸಮಿತಿಗಳಿದ್ದು, ಈಗ ಪ್ರತಿಷ್ಠಾಪನೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಶುಲ್ಕ ವಿಧಿಸಿ ಹಿಂದೂ ಸಮಾಜಕ್ಕೆ ಗಣಪತಿ ಪ್ರತಿಷ್ಠಾಪನೆ ಮಾಡಲು ತೊಂದರೆ ಕೊಡುತ್ತಿವೆ ಎಂದು ಆರೋಪಿಸಿದರು.

ಹಬ್ಬಕ್ಕಾಗಿ ಫ್ಲೆಕ್ಸ್ ಗಳನ್ನು ಹಾಕಲು ಗಣಪತಿ ಮಂಡಳಿ ಸದಸ್ಯರಿಂದ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ರಾಜಕೀಯ ವ್ಯಕ್ತಿಗಳ ಆಗಮನ ಹಾಗೂ ಹುಟ್ಟಿದ ಹಬ್ಬಗಳ ಫ್ಲೆಕ್ಸ್ ಗಳಿಗೆ ಯಾವುದೇ ಶುಲ್ಕ ಸಂಗ್ರಹಿಸದ ಪಾಲಿಕೆ ಕೇವಲ ಹಿಂದೂಗಳ ಹಬ್ಬಕ್ಕೆ ಈ ಶುಲ್ಕ ವಿಧಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಬಜರಂಗದಳದ ಆನಂದರಾವ್ ಮಾತನಾಡಿ, ಗಣಪತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಏಕಗವಾಕ್ಷಿಯನ್ನು ಮೂರು ಕಡೆ ತೆರೆಯುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ, ಕೇವಲ ಎರಡು ಕಡೆ ಮಾತ್ರ ಏಕಗವಾಕ್ಷಿ ತೆರೆಯಲಾಗಿದೆ. ಅಲ್ಲಿಯೂ ಕೂಡ ಅಧಿಕಾರಿಗಳು ಅನುಮತಿ ನೀಡಲು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಮುಖ್ಯವಾಗಿ ಮೆಸ್ಕಾಂ ಇಲಾಖೆಯವರು ಅಲ್ಲಿ ಇರುವುದೇ ಇಲ್ಲ. ಜಿಲ್ಲಾಡಳಿತದ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಕೂಡಲೇ ಮೂರೂ ಕಡೆಯೂ ಏಕಗವಾಕ್ಷಿ ತೆರೆಯಬೇಕು. ಮಹಿಳಾ ಠಾಣೆಯಲ್ಲಿ ಇದುವರೆಗೂ ಏಕಗವಾಕ್ಷಿ ತೆರೆದಿಲ್ಲ. ತಕ್ಷಣವೇ ತೆರೆಯಬೇಕು ಮತ್ತು ಗಣಪತಿ ಸಮಿತಿಯವರಿಗೆ ಯಾವುದೇ ರೀತಿಯ ಕಿರುಕುಳ ಮತ್ತು ವಿಳಂಬ ಮಾಡದೇ ಅನುಮತಿ ನೀಡಬೇಕು. ವಿಶೇಷವಾಗಿ ಮಹಾನಗರ ಪಾಲಿಕೆ ಗಣಪತಿ ಹಬ್ಬಕ್ಕಾಗಿ ಹಾಕಿರುವ ಫ್ಲೆಕ್ಸ್ ಗಳಿಗೆ ಶುಲ್ಕ ತೆಗೆದುಕೊಳ್ಳಬಾರದು. ಒಂದು ಪಕ್ಷ ತೆಗೆದುಕೊಂಡಿದ್ದರೆ ಅದನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಡಿಜೆಯನ್ನು ನಿಷೇಧ ಮಾಡಿದೆ. ಇದು ಸರಿಯಲ್ಲ. ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಹಿಂದೂಗಳ ಹಬ್ಬಕ್ಕಾಗಿ ಉದ್ಯಮಿಗಳು ಡಿಜೆಗೆ ಬಂಡವಾಳ ಹೂಡಿರುತ್ತಾರೆ. ಗಣಪತಿ ಮಂಡಳಿಗಳು ಕೂಡ ಈಗಾಗಲೇ ಡಿಜೆಗಳಿಗೆ ಹಣ ನೀಡಿರುತ್ತಾರೆ. ಸಂಭ್ರಮದಿಂದ ಗಣಪತಿ ಹಬ್ಬ ಆಚರಿಸುವುದಕ್ಕೂ ಕೂಡ ಸರ್ಕಾರ ಮತ್ತು ಮಹಾನಗರ ಪಾಲಿಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದರು.

ನಗರದಲ್ಲಿ ಪುಟ್ಟ ಪುಟ್ಟ ಮಕ್ಕಳು ಕೂಡ ಪೆಂಡಾಲ್ ಹಾಕಿ ಗಣಪತಿ ಪ್ರತಿಷ್ಠಾಪನೆ ಮಾಡಿರುತ್ತಾರೆ. ಸಣ್ಣಪುಟ್ಟ ಶ್ಲೋಕ ಅಥವಾ ಗೀತೆಗಳನ್ನು ಹಾಕಲು ಸಹ ಮೈಕ್ ಗೆ ಹಣ ಕಟ್ಟಬೇಕು ಎಂದರೆ ಅವರು ಎಲ್ಲಿಂದ ತರಬೇಕು? ಇದು ಹಿಂದೂಗಳ ಹಬ್ಬ ಅಲ್ಲವೇ? ಗಣಪತಿ ಹಬ್ಬವನ್ನು ಸ್ವಾತಂತ್ರ್ಯ ಪೂರ್ವಕ್ಕೂ ಮೊದಲೇ ಆಚರಿಸಲಾಗುತ್ತಿತ್ತು. ಆಗ ಇಲ್ಲದ ನಿಯಮಗಳು ಈಗ ಏಕೆ ಎಂದು ಪ್ರಶ್ನಿಸಿದರು.

ಗಣಪತಿ ಪ್ರತಿಷ್ಠಾಪನೆ ಮಾಡುವ ಗಣಪತಿ ಮಂಡಳಿಗಳು ಯಾವುದೇ ಕಾರಣಕ್ಕೂ ಫ್ಲೆಕ್ಸ್ ಗಳಿಗೆ ಶುಲ್ಕ ಕಟ್ಟಬಾರದು. ಮತ್ತು ಸಣ್ಣಪುಟ್ಟ ಪೆಂಡಾಲ್ ಗಳಲ್ಲಿ ಹಾಕುವ ಫ್ಲೆಕ್ಸ್ ಗಳಿಗೂ ಹಣ ವಸೂಲಿ ಮಾಡಬಾರದು, ಅಲ್ಲಿ ಬಳಸುವ ಮೈಕ್ ಗಳಿಗೂ ಶುಲ್ಕ ಕಟ್ಟಬಾರದು. ಯಾವುದೇ ಇಲಾಖೆಯಿಂದ ಅಥವಾ ಅಧರ್ಮಿಗಳಿಂದ ಗಣಪತಿ ಮಂಡಳಿಗೆ ತೊಂದರೆಯಾದರೆ ಮೊಬೈಲ್ ಸಂಖ್ಯೆ 9448018234, 9606311998 ಸಂಪರ್ಕಿಸಬಹುದು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಾಮರಸ್ಯ ಪ್ರಮುಖ್ ರಮೇಶ್ ಬಾಬು ಹಾಗೂ ಕಾರ್ಯಕಾರಿಣಿ ಸದಸ್ಯ ಅ. ರಾಮಪ್ಪ ಮಾತನಾಡಿ, ಧರ್ಮಸ್ಥಳದ ಮೇಲೆ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಈಗಾಗಲೇ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಪಪ್ರಚಾರ ಮಾಡುತ್ತಿರುವವರನ್ನು ನೇರವಾಗಿ ಜೈಲಿಗೆ ಅಟ್ಟಬೇಕು. ಸರ್ಕಾರ ಎಸ್ಐಟಿ ರಚಿಸಿದ್ದೇ ತಪ್ಪು. ಧಾರ್ಮಿಕ ಕ್ಷೇತ್ರಗಳ ಮೇಲಿನ ದಾಳಿಯನ್ನು ಶ್ರೀ ಕ್ಷೇತ್ರದ ವೀರೇಂದ್ರ ಹೆಗಡೆ ಸೇರಿದಂತೆ ಹಿಂದೂ ಶ್ರೀಗಳ ಮೇಲೆ ಮಾಡುವ ಅವಮಾನವನ್ನು ಯಾವ ಕಾರಣಕ್ಕೂ ಹಿಂದೂಗಳು ಸಹಿಸುವುದಿಲ್ಲ ಎಂದರು.

ಗೋಷ್ಠಿಯಲ್ಲಿ ಬಜರಂಗದಳದ ಪ್ರಮುಖರಾದ ರಾಜೇಶ್ ಗೌಡ, ವಿನೋದ್ ಕುಮಾರ್ ಜೈನ್, ಮಂಜುನಾಥ್, ಮುಂತಾದವರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!