ಹಾವೇರಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಅಭಿವೃದ್ಧಿಗೆ 670 ಕೋಟಿ ರು. ಹಾಗೂ ಉಪಕರಣಗಳ ಖರೀದಿಗೆ 220 ಕೋಟಿ ರು. ಅನುದಾನವನ್ನು ಮುಖ್ಯಮಂತ್ರಿಗಳು ಮೀಸಲಿಟ್ಟಿದ್ದಾರೆ. ಸಿಎಂ ಜತೆಗೆ ಚರ್ಚಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾದಗಿರಿ ಮತ್ತು ಕಾರವಾರ ಜಿಲ್ಲೆಗೆ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದಾರೆ. ಸುಮಾರು 670 ಕೋಟಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳು ಕಾಯ್ದಿರಿಸಿದ್ದಾರೆ. ಹಿಂದೆ ನಾನು ಸಿಎಂ ಜತೆಗೆ ಮಾತನಾಡುವ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳು ಈ ಬಾರಿ 29 ಸಾವಿರ ಕೋಟಿ ರು. ಕೇಂದ್ರ ಸರ್ಕಾರದ ಜಿಎಸ್‌ಟಿ ಏರಿಕೆಯಾಗುತ್ತದೆ. ಅದನ್ನು ಸರಿದೂಗಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದು ತಿಳಿಸಿದ್ದರು. ಅದರಂತೆ ಮತ್ತೊಂದು ಸಾರಿ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ತೆರಳಿ ಚರ್ಚಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನುದಾನವೂ ಸರಿಯಾಗಿ ಬರುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಸ್ವತಃ ಸಿಎಂ ಹೇಳಿದ್ದಾರೆ. ಹೆಚ್ಚು ಸಾಲವನ್ನು ಮಾಡುವುದಿಲ್ಲ, ಹೆಚ್ಚು ಯೋಜನೆಗಳನ್ನು ರೂಪಿಸಲಿಕ್ಕೆ ಆಗುತ್ತಿಲ್ಲ. ಇದ್ದುದ್ದರಲ್ಲೇ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್‌ನ್ನು ಮಂಡಿಸಿದ್ದಾರೆ ಎಂದರು. ಜಿಲ್ಲೆಯ ಬೇರೆ ತಾಲೂಕಿನ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ, ಅನುದಾನ ತಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಹೆಗ್ಗೇರಿ ಕೆರೆ ಸೇರಿದಂತೆ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಹಾಗಾಗಿ ಕೆರೆ ತುಂಬಿಸುವ ಯೋಜನೆ ಸದ್ಯಕ್ಕಿಲ್ಲ ಎಂದ ಅವರು, ತುಂಗಭದ್ರಾ ನದಿಗೆ ಚೆಕ್‌ಡ್ಯಾಂ ನಿರ್ಮಾಣಕ್ಕೆ ಈ ಮೊದಲೇ 50 ಕೋಟಿ ಅನುದಾನವನ್ನು ಮೀಸಲಿಟ್ಟಿದೆ ಎಂದರು. ಕಳೆದ ಬಾರಿ ಒಂದು ಶ್ರಮಿಕ ಶಾಲೆ ಬ್ಯಾಡಗಿಗೆ ಮಂಜೂರಾಗಿತ್ತು, ಈ ಸಲ ಜಿಲ್ಲೆಯ ಎಲ್ಲಾ ಕಡೆಗೂ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಲೂ ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದೇವೆ ಎಂದರು. ಹಾವೇರಿಗೆ ಸಿಲ್ಕ್ ಪಾರ್ಕ್: ಯಾವ ತಾಲೂಕಿಗೆ ಸಿಲ್ಕ್ ಪಾರ್ಕ್ ಕೊಟ್ಟಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಜವಳಿ ಪಾರ್ಕ ಹಾವೇರಿಗೆ ಘೋಷಣೆಯಾಗಿತ್ತು. ಸ್ಥಳಾವಕಾಶದ ಕೊರತೆಯಿಂದ ರಾಣಿಬೆನ್ನೂರು ಹೂಲಿಹಳ್ಳಿ ಕಡೆಗೆ ಹೋಯಿತು. ಈ ಬಾರಿ ಸಿಲ್ಕ್ ಪಾರ್ಕ್ ಹಾವೇರಿಯಲ್ಲಿ ಮಾಡಲು ಮುಂದಾಗಿದ್ದೇವೆ ಎಂದರು.ಯುಜಿಡಿ ಕಾಮಗಾರಿ: ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹೆಗ್ಗೇರಿ ಕೆರೆ, ವರದಾ, ತುಂಗಭದ್ರಾ ನದಿಯಿಂದಲೂ ಕೆರೆಗಳನ್ನು ತುಂಬಿಸಿದ್ದೇವೆ. ಯಾವುದೇ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ನನ್ನ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ. ಸುಮಾರು 220 ಕೋಟಿಯಷ್ಟು ಕಾಮಗಾರಿ ನಡೆಯುತ್ತಿದೆ. ಅಮೃತ ಯೋಜನೆಯಡಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕೆಲಸದಲ್ಲಿ ವೇಗ ಹೆಚ್ಚಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.