ರಾಜ್ಯದಲ್ಲಿ ಐಐಟಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ: ಚಲುವರಾಯಸ್ವಾಮಿ

KannadaprabhaNewsNetwork |  
Published : Feb 21, 2026, 01:45 AM IST
20ಕೆಎಂಎನ್‌ಡಿ-16 ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶುಕ್ರವಾರ ನಡೆದ ಡಾ.ನಿರ್ಮಲಾನಂದನಾಥಶ್ರೀಗಳ 13ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀಗಳ ಜೊತೆಗೂಡಿ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೃತಕ ಬುದ್ಧಿಮತೆ (ಎಐ) ಉದ್ಯೋಗ ಸೇರಿದಂತೆ ಕ್ಷೇತ್ರಗಳಲ್ಲಿಯೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 10ವರ್ಷದಲ್ಲಿ ಉದ್ಯೋಗ ಸಿಗುವುದಿಲ್ಲ ಎಂದು ಆತಂಕದಲ್ಲಿರುವ ಶೇ.99ರಷ್ಟು ವಿದ್ಯಾವಂತ ಯುವಕರು ಏಕೆ ಓದಬೇಕೆಂದುಕೊಳ್ಳುತ್ತಿದ್ದಾರೆ. ಅದನ್ನು ಸ್ವಲ್ಪ ಪಕ್ಕಕ್ಕಿಟ್ಟು ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ .

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಐಐಟಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಾ.ನಿರ್ಮಲಾನಂದನಾಥಶ್ರೀಗಳ 13ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಜ್ಞಾತಂ ಪ್ರಶಸ್ತಿ ಪಡೆದ ಡಾ.ಎಂ.ಕೆ.ಸೂರಪ್ಪ ಅವರು ಐಐಟಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಮೈಸೂರು ಭಾಗದಲ್ಲಿ ಐಐಟಿಯನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ನಾನು ಲೋಕಸಭಾ ಸದಸ್ಯನಾಗಿದ್ದ ಅವಧಿಯಲ್ಲಿ ಪ್ರಯತ್ನಿಸಿದರೂ ಕೂಡ ಕೆಲ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಐಐಟಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಬೃಹತ್ ಸಂಕಲ್ಪ ಚೈತನ್ಯ ಶಕ್ತಿಯಾಗಿ ಆದಿಚುಂಚನಗಿರಿ ಮಠ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಕೃತಕ ಬುದ್ಧಿಮತ್ತೆ (ಎಐ)ಯ ಈ ಶರವೇಗದ ಯುಗದಲ್ಲಿ ವಿದ್ಯಾರ್ಥಿಗಳು ಕ್ರಮವರಿತು ಅಧ್ಯಯನ ನಡೆಸಿದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಆದಿಚುಂಚನಗಿರಿ ಕ್ಷೇತ್ರವು ಆಧ್ಯಾತ್ಮಿಕ ಧಾರ್ಮಿಕ ನೆಲೆಗಟ್ಟಿನ ಮಠವಾದರೂ ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಪೂರಕ ಶಕ್ತಿಯಾಗಿ ನಿಂತು ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಬೇರೆ ಯಾವುದೇ ಮಠಗಳಿಂದಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಸಮಾಜಕ್ಕೆ ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆ ಇದೆ ಎಂಬುದನ್ನು ಕಳೆದ 13 ವರ್ಷಗಳ ಹಿಂದೆಯೇ ಅರಿತು ಡಾ.ನಿರ್ಮಲಾನಂದನಾಥ ಶ್ರೀಗಳು ತಮ್ಮ ವಾರ್ಷಿಕ ಪಟ್ಟಾಭಿಷೇಕವನ್ನು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಉತ್ಸವ ಮಾಡುವ ಮೂಲಕ ಹೊಸ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವ ಜೊತೆಗೆ ವೈಜ್ಞಾನಿಕ ಮಾಹಿತಿಯನ್ನು ನೀಡುವಲ್ಲಿ ಸಫಲವಾಗಿದ್ದಾರೆ ಎಂದು ಹೇಳಿದರು.

ವಿಜ್ಞಾತಂ ಸಂಚಯ ಪುಸ್ತಕ ಲೋಕಾರ್ಪಣೆಗೊಳಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ,

ಕೃತಕ ಬುದ್ಧಿಮತ್ತೆಯು ಹೀಗೆ ಮುಂದುವರಿದರೆ ಜಗತ್ತಿಗೆ ಮಾರಕವೇ ಸರಿ. ವಿಜ್ಞಾನದ ಮೂಲ ತತ್ವಗಳಿಂದ ಪ್ರಾಯೋಗಿಕವಾಗಿ ಕಲಿತರೆ ಉತ್ತಮ ಸಾಧನೆಯಾಗುತ್ತದೆ. ವೈಜ್ಞಾನಿಕವಾಗಿ ಸಾಧಿಸಿದ ಅನೇಕ ಆವಿಷ್ಕಾರಗಳನ್ನು ಕಂಡಿದ್ದೇವೆ, ಚಂದ್ರಯಾನದಂತಹ ಪ್ರಗತಿಯನ್ನು ನೋಡಿದ್ದೇವೆ. ಮಾನವ ಸಂಪನ್ಮೂಲ ವಿನಿಯೋಗವಾಗಬೇಕು. ಹೊಸ ಅನ್ವೇಷಣೆಗಳಿಗೆ ಆಸಕ್ತಿ ಮೂಡಿಸಬೇಕು ಎಂದರು.

ವಿಜ್ಞಾತಂ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ವಿಜ್ಞಾನಿ ಡಾ.ಎಂ.ಕೆ.ಸೂರಪ್ಪ ಮಾತನಾಡಿ, ಭೈರವೈಕ್ಯಶ್ರೀಗಳ ಅನ್ನ- ಅಕ್ಷರ- ಆರೋಗ್ಯದಿಂದ ಆರಂಭಿಸಿದ ಶ್ರೀಮಠವು ವಿಜ್ಞಾನ, ತಂತ್ರಜ್ಞಾನ , ಅರಣ್ಯದಂತಹ ಮೇರು ಆಶಯಗಳೊಂದಿಗೆ ಸಮಾಜದ ಆಧಾರ ಸ್ಥಂಭವಾಗಿದೆ. ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಹೆಚ್ಚಿಸಿ ರಾಷ್ಟ್ರಮಟ್ಟದಲ್ಲಿ ರ್‍ಯಾಂಕಿಂಗ್ ಉತ್ತಮಪಡಿಸುವಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ ಎಂದು ಹೇಳಿದರು.

ಆಶೀರ್ವವಚನ ನೀಡಿದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮಾತನಾಡಿ, ಕೃತಕ ಬುದ್ಧಿಮತೆ (ಎಐ) ಉದ್ಯೋಗ ಸೇರಿದಂತೆ ಕ್ಷೇತ್ರಗಳಲ್ಲಿಯೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 10ವರ್ಷದಲ್ಲಿ ಉದ್ಯೋಗ ಸಿಗುವುದಿಲ್ಲ ಎಂದು ಆತಂಕದಲ್ಲಿರುವ ಶೇ.99ರಷ್ಟು ವಿದ್ಯಾವಂತ ಯುವಕರು ಏಕೆ ಓದಬೇಕೆಂದುಕೊಳ್ಳುತ್ತಿದ್ದಾರೆ. ಅದನ್ನು ಸ್ವಲ್ಪ ಪಕ್ಕಕ್ಕಿಟ್ಟು ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದರು.

ಶೇ.50ಕ್ಕಿಂತ ಹೆಚ್ಚು ರೈತರು ವ್ಯವಸಾಯ ಮಾಡುತ್ತಿದ್ದರೂ ಸಹ ಶೇ.16ರಷ್ಟು ಮಾತ್ರ ದೇಶದ ಆರ್ಥಿಕತೆಗೆ ಸಿಗುತ್ತಿದೆ ಎಂದರೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಥವಾ ಬೆಳೆಯುವ ವಿಧಾನಕ್ಕೆ ಆಧುನಿಕ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ಉತ್ಪಾದನಾ ವಲಯ ಅಭಿವೃದ್ಧಿಯಾದರೆ ಮುಂದಿನ ಭವಿಷ್ಯದ ಭಾರತ ಇಡೀ ಪ್ರಪಂಚದಲ್ಲಿ ಎರಡು ಅಥವಾ ಮೂರನೇ ಸ್ಥಾನಕ್ಕೇರಲಿದೆ. ಹಾಗಾಗಿ ಉನ್ನತ ಶಿಕ್ಷಣ ಪಡೆದಿರುವ ಯುವಕರು ನಿರಾಶರಾಗಬಾರದು ಎಂದು ಹೇಳಿದರು.

ಚಿತ್ರದುರ್ಗದ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿದರು.

ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಖ್ಯಾತ ವಿಜ್ಞಾನಿ ಡಾ.ಎಂ.ಕೆ.ಸೂರಪ್ಪ ಅವರಿಗೆ ₹5 ಲಕ್ಷ ನಗದು ಹಾಗೂ ಪ್ರಶಸ್ತಿ ಪದಕವನ್ನೊಳಗೊಂಡ ಈ ವರ್ಷದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪಟ್ಟಾಭಿಷೇಕ ಹಾಗೂ ವಿಜ್ಞಾತಂ ಉತ್ಸವದ ಪ್ರಯುಕ್ತ ಐದು ವಿಭಾಗಗಳಲ್ಲಿ ಆಯೋಜಿಸಿದ್ದ ವಿಜ್ಞಾನ, ತಂತ್ರಜ್ಞಾನ ವಸ್ತು ಪ್ರದರ್ಶನ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಅಮೆರಿಕದ ಬಾಬು ಕೀಲಾರ, ಅಕ್ಕ ಸಮ್ಮೇಳನದ ರೂವಾರಿ ಡಾ. ಅಮರನಾಥಗೌಡ, ಮಾಜಿ ಶಾಸಕ ಸುರೇಶ್‌ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎನ್. ಶ್ರೀಧರ ಸೇರಿದಂತೆ ಎಲ್ಲಾ ಶಾಖಾ ಮಠಗಳ ಶ್ರೀಗಳು, ವೈದ್ಯಕೀಯ ಕಾಲೇಜಿನ ಅಧಿಕಾರಿಗಳು, ಸಹಸ್ರಾರು ಮಂದಿ ವಿದ್ಯಾರ್ಥಿಗಳು ಮತ್ತು ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಂತರ ಚಿರತೆ ಹಾವಳಿ: ರೈತರಲ್ಲಿ ತಪ್ಪದ ಭೀತಿ
ಸಾಮಾಜಿಕ ನ್ಯಾಯದ ಪ್ರತಿಪಾದಕ ಕವಿ ಸರ್ವಜ್ಞ: ಸಿ.ಎಸ್.ಚಂದ್ರಭೂಪಾಲ