ಕನ್ನಡಪ್ರಭ ವಾರ್ತೆ ಸಿಂಧನೂರು ಕೇಂದ್ರ ಸರ್ಕಾರ ಮೂರನೇ ಹಂತದ ಸಮೀಕ್ಷೆಯಲ್ಲಿ ಎಲ್ಲ ಮಾನದಂಡಗಳನ್ನು ಪರಿಶೀಲಿಸಿದ ನಂತರ, ನಿಯಮಗಳನ್ವಯ ಸಿಂಧನೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023-24ನೇ ಸಾಲಿನಲ್ಲಿ ತಾಲೂಕಿನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಬರಪೀಡಿತ ತಾಲೂಕು ಎಂದು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಟಿ.ಸಿ. ಕಾಂತರಾಜ ವರದಿ ಕಳಿಸಿದ್ದರು. ಕೇಂದ್ರ ಸರ್ಕಾರ ಬರ ನಿರ್ವಹಣೆ ಕೈಪಿಡಿ-2020ರ ಮಾರ್ಗಸೂಚಿ ಅನ್ವಯ ತಹಸೀಲ್ದಾರರು, ಜಿಲ್ಲಾಧಿಕಾರಿ ವರದಿ ಕಂದಾಯ ಇಲಾಖೆಗೆ ಕಳುಹಿಸಿದ್ದರು ಎಂದರು. ಬೆಳೆ ಹಾನಿ ಸಮೀಕ್ಷೆ, ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಮಳೆಯ ಕೊರತೆ, ಶುಷ್ಕ ವಾತಾವರಣ, ಭೂಮಿಯ ತೇವಾಂಶದ ಕೊರತೆ, ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ, ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟದ ಸೂಚ್ಯಾಂಕ ಗಳಲ್ಲಿನ ತೀವ್ರತೆ ಆಧರಿಸಿ ವರದಿ ಸಂಪೂರ್ಣ ಪರಿಶೀಲಿಸಿದ ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ಸಿಂಧನೂರು ತಾಲೂಕು ಸೇರಿ ಮೂರನೇ ಹಂತದಲ್ಲಿ ಒಟ್ಟು 7 ತಾಲೂಕು ಬರಪೀಡಿತ ತಾಲೂಕಗಳೆಂದು ಘೋಷಣೆ ಮಾಡಲು ವರದಿ ಕಳಿಸಿದ್ದರು. ಅದರನ್ವಯ ಕೇಂದ್ರ ಸರ್ಕಾರವು ಸಿಂಧನೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಿದೆ ಎಂದು ವಿವರಿಸಿದರು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿದೇರ್ಶಕರಿಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸಲ್ಲಿಸಿದ್ದರು. ನಂತರ ಕೇಂದ್ರ ಸರ್ಕಾರ ಪರಿಶೀಲಿಸಿದ ಮೇಲೆ ಬರಪೀಡಿತವೆಂದು ಸಿಂಧನೂರನ್ನು ಘೋಷಿಸಲಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ದೇಸಾಯಿ ಹೇಳಿದರು. ರೈತರು ಬೆಳೆ ವಿಮೆ ಮಾಡಿಸಲು ಶಾಸಕ ಬಾದರ್ಲಿ ಮನವಿ ಬೆಳೆ ಸಾಲ ಪಡೆದ ರೈತರು ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ‘ಸಂರಕ್ಷಣೆ’ ಪೋರ್ಟಲ್ ಮೂಲಕ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದರು. 2023-24ನೇ ಸಾಲಿನ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಮಳೆಯಾಶ್ರಿತ ಬೆಳೆಗಳಾದ ಕಡಲೆ, ಜೋಳ, ಹಿಂಗಾರು ಹಂಗಾಮಿನ ಹೋಬಳಿ ಮಟ್ಟದ ನೀರಾವರಿ ಬೆಳೆಗಳಾದ ಕಡಲೆ, ಜೋಳ, ಮುಸುಕಿನ ಜೋಳ, ಮಳೆಯಾಶ್ರಿತ ಬೆಳೆಗಳಾದ ಅಗಸೆ, ಕುಸುಬೆ, ಗೋಧಿ ಹಾಗೂ ಬೇಸಿಗೆ ಹಂಗಾಮಿನ ಗ್ರಾಪಂ ಮಟ್ಟದ ನೀರಾವರಿ ಬೆಳೆಗಳಾದ ಶೇಂಗಾ, ಭತ್ತ, ಬೇಸಿಗೆ ಹಂಗಾಮಿನ ಹೋಬಳಿ ಮಟ್ಟದ ನೀರಾವರಿ ಬೆಳೆಗಳಾದ ಶೇಂಗಾ, ಭತ್ತ, ಸೂರ್ಯಕಾಂತಿ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಬೆಳೆ ವಿಮೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ಸಹಾಯಕ ಕೃಷಿ ನಿರ್ದೇಶಕ ನಜೀರಸಾಬ್, ತಾಂತ್ರಿಕ ಸಹಾಯಕ ಕಳಕಪ್ಪ ಇದ್ದರು.