ವಿಶ್ವ ವಿಖ್ಯಾತ ಹಂಪಿ ಪಕ್ಕದಲ್ಲೇ ಇರುವ ಸಿಂಗನಾಥನಹಳ್ಳಿ ಗ್ರಾಮದ ಮಕ್ಕಳು ಕಡ್ಡಿರಾಂಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಬಸ್ ಏರಿ ಹೊರಟರು! ಸಿಂಗನಾಥನಹಳ್ಳಿ ಮಕ್ಕಳು ಶಾಲೆಗಾಗಿ ನಿತ್ಯ 3 ಕಿಮೀ ನಡೆದುಕೊಂಡು ತೆರಳುತ್ತಿದ್ದರು.
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಪಕ್ಕದಲ್ಲೇ ಇರುವ ಸಿಂಗನಾಥನಹಳ್ಳಿ ಗ್ರಾಮದ ಮಕ್ಕಳು ಕಡ್ಡಿರಾಂಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಬಸ್ ಏರಿ ಹೊರಟರು! ಈ ಮಕ್ಕಳ ಮೊಗದಲ್ಲೂ ಹರ್ಷ ಮೂಡಿತ್ತು. ಅವರ ಖುಷಿಗೆ ಪಾರವೇ ಇರಲಿಲ್ಲ.
ಸಿಂಗನಾಥನಹಳ್ಳಿ ಮಕ್ಕಳು ಶಾಲೆಗಾಗಿ ನಿತ್ಯ 3 ಕಿಮೀ ನಡೆದುಕೊಂಡು ತೆರಳುತ್ತಿದ್ದರು. ''''ಕನ್ನಡಪ್ರಭ'''' ಜೂ. 11ರಂದು ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಬಿಇಒ ಶೇಖರ ಹೊರಪೇಟೆ, ಸಾರಿಗೆ ಡಿಸಿ ತಿಮ್ಮಾರೆಡ್ಡಿ ಅವರು ಪರಿಶೀಲನೆ ನಡೆಸಿ, ಬಸ್ ಬಿಡಲು ಡಿಪೋ ಮ್ಯಾನೇಜರ್‌ಗೆ ಸೂಚಿಸಿದ್ದರು. ಈ ಮಧ್ಯೆ ಹೈಕೋರ್ಟ್ ವಕೀಲರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲೂ ಈ ವರದಿಯ ಕ್ಲಿಪಿಂಗ್ ಹರಿದಾಡಿದೆ. ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಗಮನಕ್ಕೂ ಹೋಗಿದೆ. ಅವರು ತಕ್ಷಣ ಹೊಸಪೇಟೆ ನ್ಯಾಯಾಧೀಶರ ಗಮನ ಸೆಳೆದಿದ್ದಾರೆ. ಹೊಸಪೇಟೆ ನ್ಯಾಯಾಧೀಶರು ಬಸ್ ಡಿಪೋ ಮ್ಯಾನೇಜರ್ ಹಾಗೂ ಹಂಪಿ ಪಿಎಸ್‌ಐ ಅವರನ್ನು ಕರೆಸಿ, ವಾಸ್ತವ ವರದಿ ಪಡೆದಿದ್ದಾರೆ. ತಕ್ಷಣವೇ ಬಸ್ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅಲ್ಲದೇ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಎಲ್ಲೆಡೆ ಬಸ್ ವ್ಯವಸ್ಥೆ ಮಾಡಲು ಮೌಖಿಕವಾಗಿ ಸೂಚಿಸಿದ್ದಾರೆ.
ಏತನ್ಮಧ್ಯೆ, ಹೊಸಪೇಟೆ ನ್ಯಾಯಾಧೀಶರೊಬ್ಬರು ತಮ್ಮ ಕೊಠಡಿಗೆ ''''ಕನ್ನಡಪ್ರಭ'''' ಪ್ರತಿನಿಧಿಯನ್ನು ಕರೆಯಿಸಿ ಇಂತಹ ಮೌಲಿಕ ವರದಿಗಳನ್ನು ಬರೆಯಬೇಕು. ಇದು ಪತ್ರಿಕೋದ್ಯಮಕ್ಕೆ ಭೂಷಣ. ಈ ವರದಿಯಿಂದ 16 ಮಕ್ಕಳ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಒಂದು ಕಡೆ ನ್ಯಾಯಾಧೀಶರು, ಇನ್ನೊಂದೆಡೆ ಶಿಕ್ಷಣ ಇಲಾಖೆ ಮತ್ತು ಸಾರಿಗೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಿಂಗನಾಥನಹಳ್ಳಿಗೆ ಬಸ್ ಬಂದಿದೆ. ಬಸ್ ಏರಿ ಹೊರಟ ಆ ಮಕ್ಕಳ ಖುಷಿ ನೋಡಲೇಬೇಕು. ಇಡೀ ಸಿಂಗನಾಥನಹಳ್ಳಿಯನ್ನು ಗ್ರಾಮಸ್ಥರು ಸಿಂಗರಿಸಿದ್ದರು. ಇಡೀ ಊರಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಅಲ್ಲಿದ್ದ ಗ್ರಾಮಸ್ಥರು, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಉಪಾಧ್ಯಕ್ಷ ಹನುಮಂತಪ್ಪ, ಪಿಡಿಒ ಗಂಗಾಧರ, ಡಿಪೋ ಮ್ಯಾನೇಜರ್ ಮರಿಲಿಂಗಪ್ಪ, ಎಸ್‌ಡಿಎಂಸಿ ಸದಸ್ಯ ಪ್ರಶಾಂತ್, ವಿವಿಧ ಇಲಾಖೆ ಅಧಿಕಾರಿಗಳು ಕನ್ನಡಪ್ರಭ ಬಳಗಕ್ಕೆ ಧನ್ಯವಾದ ಅರ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.