ಏ. 3ರಂದು ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 28, 2025, 12:31 AM IST
 27ಎಂಡಿಜಿ1. ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವರು. | Kannada Prabha

ಸಾರಾಂಶ

ಏ. 3ರಿಂದ 5ರ ವರೆಗೆ ಮೂರು ದಿನಗಳ ಕಾಲ ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಏ. 3ರಂದು ಬೆಳಗ್ಗೆ ವೀರಭದ್ರ ದೇವರಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಾಯಂಕಾಲ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.

ಮುಂಡರಗಿ: ಏ. 3ರಿಂದ 5ರ ವರೆಗೆ ಮೂರು ದಿನಗಳ ಕಾಲ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.

ಅವರು ಗುರುವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಏ. 3ರಂದು ಬೆಳಗ್ಗೆ ವೀರಭದ್ರ ದೇವರಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಾಯಂಕಾಲ 5 ಗಂಟೆಗೆ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ, ನಾಡಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗಲಿದೆ. ಸಂಜೆ 7 ಗಂಟೆಗೆ ಧರ್ಮಸಭೆ ಜರುಗಲಿದ್ದು, ಕಲಕೇರಿ-ವಿರೂಪಾಪುರ ಮಠದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಕಂದಗಲ್ ಪುರ ಕಟ್ಟೀಮನಿ ಹಿರೇಮಠದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಿಂಗಟಾಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲರಡ್ಡಿ ನೀರಲಗಿ, ಉಪಾಧ್ಯಕ್ಷೆ ಕೊಟ್ರಮ್ಮ ಸೂಲಿ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಆಗಮಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಪ್ರೊ.ಎಂ.ಜಿ. ಗಚ್ಚಣ್ಣನವರ ಅತಿಥಿ ಉಪನ್ಯಾಸಕರಾಗಿ ಮಾತನಾಡಲಿದ್ದಾರೆ.

ಉತ್ತಂಗಿಯ ಸಂಗೀತಾ ಅಬ್ಬಿಗೇರಿ ಹಿರೇಮಠ ಸಂಗೀತ ಸೇವೆ ನೆರವೇರಿಸಿಕೊಡಲಿದ್ದಾರೆ. ಅವರಿಗೆ ಕೊಟ್ರೇಶ ಎ.ಎಚ್.ಎಂ. ಹಾಗೂ ಹಾಲಪ್ಪ ಕೋಗಳಿ ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಲಿದ್ದಾರೆ. ಧರ್ಮ ಸಭೆಯ ನಂತರ ಕಬನೂರಿನ ಶ್ರೀ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಯುವ ಸಂಘದ ಕಲಾವಿದರಿಂದ ಜಾನಪದ ಹಾಗೂ ಹಾಸ್ಯ ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಲಿವೆ.ಏ.4ರಂದು ಬೆಳಗ್ಗೆ 8 ಗಂಟೆಗೆ ಶ್ರೀವೀರಭದ್ರೇಶ್ವರ ಅಗ್ನಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿಯೂ ಸಹ ನಾಡಿನ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಏ.5ರಂದು ಸಾಯಂಕಾಲ 6 ಗಂಟೆಗೆ ಓಕಳಿ ಜರುಗಲಿದೆ. ಈ ಜಾತ್ರೆಗೆ ಪಕ್ಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಳ್ಳುತ್ತಾ ಬಂದಿದ್ದು, ಈ ಬಾರಿಯೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ ಕೊಟ್ರೇಶ ಬಳ್ಳೊಳ್ಳಿ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ನಿತ್ಯ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಅಗ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವವರಿಗೆ ನದಿಯ ದಂಡೆಯಲ್ಲಿ ಕುಳಿತುಕೊಂಡು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಬರುವ ಭಕ್ತರು ನದಿಯಲ್ಲಿ ತಮ್ಮ ಮಕ್ಕಳು, ಯುವಕರು ಈಜಲು ಹೋಗದಂತೆ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಸದಸ್ಯ ಸುಭಾಸಪ್ಪ ಬಾಗೇವಾಡಿ, ರಜನೀಕಾಂತ ದೇಸಾಯಿ, ನಾಗೇಶ ಹುಬ್ಬಳ್ಳಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ