ಶಾಕಾರ ಬಳಿ ಇರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್ನಿಂದ ದಾಸನಹಳ್ಳಿ, ಹ್ಯಾರಡ ಗ್ರಾಮದ ಹಳೆ ಮಲಿಯಮ್ಮನ ಕೆರೆ, ಹೊಸ ಮಲಿಯಮ್ಮನ ಕೆರೆಗಳಿಗೆ ನಿರಂತರ ನೀರು ಹರಿಸಲಾಗುತ್ತಿದೆ.
ಚಂದ್ರು ಕೊಂಚಿಗೇರಿ ಹೂವಿನಹಡಗಲಿ
ಬರಗಾಲದಂತಹ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಆಸರೆಯಾಗಿದೆ. ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಮಳೆ ಇಲ್ಲದೇ ಒಣಗುತ್ತಿದ್ದ ಬೆಳೆಗಳಿಗೆ ಯೋಜನೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ನೀರುಣಿಸುವ ಕಾರ್ಯ ನಿರಂತರವಾಗಿದೆ. ಜತೆಗೆ ಕೆಲ ಕೆರೆ ಹೊರತು ಪಡಿಸಿ ಉಳಿದೆಲ್ಲ ಕೆರೆಯಂಗಳದಲ್ಲಿ ತುಂಭದ್ರೆಯ ನೀರು ತುಂಬಿಕೊಂಡಿದೆ. ಇದರಿಂದ ಜನ ಜಾನುವಾರುಗಳ ನೀರಿನ ದಾಹ ಇಂಗಿಸಿದೆ.
ತಾಲೂಕಿನ ಮಾಗಳ ಬಳಿಯ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಅರಳಿಹಳ್ಳಿ, ಹಿರೇಹಡಗಲಿ, ಹಗರನೂರು, ಮಾನ್ಯರ ಮಸಲವಾಡ, ಕಗ್ಗಲಗಟ್ಟಿ ತಾಂಡಾ, ಮುದೇನೂರು, ದೇವಗೊಂಡನಹಳ್ಳಿ, ನಾಗತಿ ಬಸಾಪುರ ಸೇರಿದಂತೆ ಇತರೆ ಕೆರೆಗಳಲ್ಲಿ ಶೇ. 40 ರಿಂದ 50 ರಷ್ಟು ನೀರು ಸಂಗ್ರಹವಾಗಿದೆ.
ಶಾಕಾರ ಬಳಿ ಇರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್ನಿಂದ ದಾಸನಹಳ್ಳಿ, ಹ್ಯಾರಡ ಗ್ರಾಮದ ಹಳೆ ಮಲಿಯಮ್ಮನ ಕೆರೆ, ಹೊಸ ಮಲಿಯಮ್ಮನ ಕೆರೆಗಳಿಗೆ ನಿರಂತರ ನೀರು ಹರಿಸಲಾಗುತ್ತಿದೆ. ಸಂಪೂರ್ಣ ತುಂಬುವ ಹಂತಕ್ಕೆ ಬಂದಿಲ್ಲ, ಆದರೆ ಬಿಸಿಲಿನ ತಾಪದಲ್ಲಿ ನೀರಿನ ದಾಹ ತಣಿಸುವಷ್ಟು ಮಾತ್ರ ನೀರು ಸಂಗ್ರಹವಾಗಿದೆ.
ಉಳಿದಂತೆ ತಳಕಲ್ಲು, ಹಿರೇಮಲ್ಲನಕೆರೆ, ಬನ್ನಿಕಲ್ಲು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಪೈಪ್ಲೈನ್ ದುರಸ್ತಿ, ಪಂಪ್ ಮೋಟಾರ್ ದುರಸ್ತಿ ಹೀಗೆ ಹತ್ತಾರು ಅಡೆತಡೆ ಎದುರಾಗಿವೆ. ಜತೆಗೆ ಪ್ರತಿಯೊಂದು ಕೆರೆಯ ಪೈಪ್ಲೈನ್ಗೆ ಅಳವಡಿಸಿದ ಎರ್ವಾಲ್ಗಳನ್ನು ಕಿತ್ತು ಹಾಕಿರುವ ರೈತರು, ಬರದಲ್ಲಿಯೂ ಕೆರೆಯ ನೀರಿಗೆ ಕನ್ನ ಹಾಕಿ ಹತ್ತಾರು ಪೈಪ್ ಅಳವಡಿಸಿ ತಮ್ಮ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇದರಿಂದ ಕೆರೆಗಳಿಗೆ ನೀರು ಹರಿಸಲು ಸಿಕ್ಕಾಪಟ್ಟೆ ತೊಂದರೆ ಉಂಟಾಗುತ್ತಿದೆ. ಪೈಪ್ಲೈನ್ ನೀರು ಸಾಕಷ್ಟು ಕಡೆಗಳಲ್ಲಿ ಪೋಲಾಗುತ್ತಿದೆ. ಇದರಿಂದ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚುವರಿ ಪಂಪ್ ಮೋಟಾರ್ ವ್ಯವಸ್ಥೆ ಇಲ್ಲ, ಪ್ರತ್ಯೇಕ ವಿದ್ಯುತ್ ಲೈನ್ಗಳಿಲ್ಲ, ಕಿತ್ತು ಹೋದ ಕಾಲುವೆ ದುರಸ್ತಿಗಳಿಗೆ ಅನುದಾನ ನೀಡಿಲ್ಲ, ಅನೇಕ ಕಡೆಗಳಲ್ಲಿ ಕೆರೆ ತುಂಬಿಸುವ ಯೋಜನೆಯ ಪೈಪ್ಲೈನ್ ಸಂಪೂರ್ಣ ಕಳಪೆಯಾಗಿದ್ದು ನೀರು ಪೂರೈಕೆ ವೇಳೆ ಕಿತ್ತು ಹೋಗುತ್ತಿವೆ. ಆ ಸಂದರ್ಭದಲ್ಲಿ ರೈತರ ಬೆಳೆಗಳು ಹಾನಿಯಾಗುತ್ತಿದೆ. ಇಂತಹ ಹತ್ತಾರು ಸಮಸ್ಯೆಗಳ ಮಧ್ಯೆ ಕೆರೆ ತುಂಬಿಸುವ ಯೋಜನೆ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆ ನಲುಗಿ ಹೋಗಿದೆ.
ಕೆರೆ ತುಂಬಿಸುವ ಯೋಜನೆ ಪೈಪ್ಗಳ ಎರ್ವಾಲ್ ಕಿತ್ತು ಹಾಕಿ,ರೈತರು ಅಕ್ರಮವಾಗಿ ಪೈಪ್ಗಳನ್ನು ಜೋಡಿಸಿಕೊಂಡು ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇದರಿಂದ ಕೆರೆಗಳಿಗೆ ಹೋಗುವ ನೀರು ಮಾರ್ಗ ಮಧ್ಯೆದಲ್ಲೇ ಸಾಕಷ್ಟು ಪೋಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಕೆರೆಗಳಿಗೆ ನೀರು ಹರಿಸುತ್ತಿದ್ದೇವೆ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ಯು.ಎಚ್.ರಾಘವೇಂದ್ರ ತಿಳಿಸಿದ್ದಾರೆ.ಬರದಲ್ಲಿ ಕೆರೆಗಳಿಗೆ ನೀರು ಹರಿಸಿದ್ದು, ಸುತ್ತಮುತ್ತಲಿನ ರೈತರ ಕೊಳವೆ ಬಾವಿಗಳಲ್ಲಿ, ಬತ್ತಿ ಹೋಗಿದ್ದ ಅಂತರ್ಜಲಕ್ಕೆ ಮರು ಜೀವ ಬಂದಿದೆ. ನೀರಿಗಾಗಿ ಅಲೆಯುತ್ತಿದ್ದ ಜನ ಜಾನುವಾರುಗಳಿಗೆ ಕೆರೆಯ ನೀರು ಆಸರೆಯಾಗಿದೆ. ಸರ್ಕಾರ ಕೆರೆ ತುಂಬಿಸುವ ಯೋಜನೆಗೆ ಹೆಚ್ಚು ಅನುದಾನ ನೀಡಿದರೆ ಕೆರೆಗಳಲ್ಲಿ ನಿರಂತರವಾಗಿ ನೀರು ಸಂಗ್ರಹವಾಗಲು ಸಾಧ್ಯ ಎಂದು ಹ್ಯಾರಡ ಗ್ರಾಮಸ್ಥ ಹರವಿ ಪ್ರಕಾಶ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.