ಕನ್ನಡಪ್ರಭ ವಾರ್ತೆ ಸಂಡೂರು
ಒಂಟಿ ಮಹಿಳೆಯರ ಗಣತಿ ಮಾಡಿ ಪುನರ್ವಸತಿ ಕಲ್ಪಿಸುವುದು ಸೇರಿ ಒಂಟಿ ಮಹಿಳೆಯರ ಹಲವು ಬೇಡಿಕೆಗಳ ಈಡೇರಿಕೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು ಸಮಿತಿ ಸದಸ್ಯರು ಸೋಮವಾರ ಪಟ್ಟಣದಲ್ಲಿ ಗ್ರೇಡ್-೨ ತಹಶೀಲ್ದಾರ್ ಸುಧಾ ಅರಮನೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ ಸುನಿತಾ, ಸಮಾಜದಲ್ಲಿ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ. ವಿವಿಧ ಕಾರಣಗಳಿಂದಾಗಿ ಒಂಟಿ ಮಹಿಳೆಯರ ಸಂಖ್ಯೆ ಬೆಳೆಯುತ್ತಿದೆ. ಪುರುಷರು ಒಂಟಿಯಾದರೆ, ಅವರಿಗೆ ಸಮಾಜದಲ್ಲಿ ಅನುಕಂಪ ದೊರೆಯುತ್ತದೆ. ಮರು ಮದುವೆಗೆ ಪ್ರೋತ್ಸಾಹ ದೊರೆಯುತ್ತದೆ. ಆದರೆ, ಗಂಡ ಸತ್ತ ಅಥವಾ ಗಂಡ ಬಿಟ್ಟ ಮಹಿಳೆಗೆ ಅಂತಹ ಪ್ರೋತ್ಸಾಹ ದೊರೆಯುವುದಿಲ್ಲ. ವಿಧವೆಯರ ಮೇಲೆ ಹಲವು ರೀತಿಯ ನಿರ್ಬಂಧ ಹಾಕಲಾಗುತ್ತದೆ ಎಂದರು.
ಆದ್ದರಿಂದ ಸರ್ಕಾರ ಒಂಟಿ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರಿಗೆ ₹೫ ಸಾವಿರ ಮಾಸಾಶನ ನೀಡಬೇಕು. ಗಂಡ ಬಿಟ್ಟ ಅಥವಾ ಗಂಡ ಸತ್ತ ನಂತರ ಒಂಟಿಯಾಗುವ ೪೫ ವರ್ಷದೊಳಗಿನ ಮಹಿಳೆಯ ಮರುಮದುವೆಗೆ ₹೫ ಲಕ್ಷ ಪ್ರೋತ್ಸಾಹ ಧನ ನೀಡಬೇಕು. ವಿದ್ಯಾವಂತ ಮಹಿಳೆಗೆ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ, ಮಾಸಿಕ ₹೧೦ ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ ೧೮ ತಿಂಗಳ ಕಾಲ ಮಾಸಿಕ ₹೧೦ ಸಾವಿರ ವಿಶೇಷ ನೆರವು ನೀಡಬೇಕು. ವೈದ್ಯಕೀಯ ರಕ್ಷಣೆ ಒದಗಿಸಬೇಕು.ಒಂಟಿ ಮಹಿಳೆಯರ ಮಕ್ಕಲ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು. ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅಗತ್ಯ ನೆರವು ನೀಡಬೇಕು. ವಸತಿ ರಹಿತ ಒಂಟಿ ಮಹಿಳೆಯರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಮುಂತಾದವು ನಮ್ಮ ಬೇಡಿಕೆಗಳಾಗಿವೆ. ಈ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಂಘದ ಸಂಚಾಲಕಿ ಎಚ್. ದುರುಗಮ್ಮ, ಸಹ ಸಂಚಾಲಕ ಎ. ಸ್ವಾಮಿ, ಕಾರ್ಯದರ್ಶಿ ಹುಲಿಗೆಮ್ಮ, ಸದಸ್ಯರಾದ ಕೆ. ಮಂಜಮ್ಮ, ಹನುಮಕ್ಕ, ಮಲ್ಲಮ್ಮ, ಕೆ. ಮಾಯಮ್ಮ, ದುರುಗಮ್ಮ, ಲಲಿತಾ ಮುಂತಾದವರಿದ್ದರು.