ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿಗಳ ಸ್ವಗ್ರಾಮದಲ್ಲಿ ಮತ್ತೊಂದು ಕೃತ್ಯ । ಹೆಣ್ಣು ಶಿಶುವಿನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಕನ್ನಡಪ್ರಭ ವಾರ್ತೆ ದಾವಣಗೆರೆ
ಹೆಣ್ಣುಭ್ರೂಣ ಹತ್ಯೆ ವಿಚಾರ ರಾಜ್ಯದಲ್ಲಿ ಗಂಭೀರ ಚರ್ಚೆಯಲ್ಲಿರುವಾಗಲೇ ಆಗಷ್ಟೇ ಜನಿಸಿದ್ದ ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗ ಕಟ್ಟಿಸಿ, ಸಾಯಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ ಅಮಾನವೀಯ ಕೃತ್ಯ ಹೊನ್ನಾಳಿ ತಾಲೂಕು ಕ್ಯಾಸನಕೆರೆ ಗ್ರಾಮದಲ್ಲಿ ವರದಿಯಾಗಿದೆ.ಹೊನ್ನಾಳಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಸಮೀಪದ ಅಜ್ಞಾನ ಸ್ಥಳದಲ್ಲಿ ನವಜಾತ ಹೆಣ್ಣು ಶಿಶುವು ಕುತ್ತಿಗೆಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣೇ ಪ್ರತ್ಯಕ್ಷಿದರ್ಶಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮುಳ್ಳು ಕಂಟಿಗಳಲ್ಲಿ ಬಿದ್ದಿದ್ದ ಹೆಣ್ಣು ಶಿಶುವನ್ನು ಗುರುತಿಸಿದ ಸ್ಥಳೀಯರು, ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಅದನ್ನು ಬಯಲಿಗೆ ತಂದಿದ್ದಾರೆ. ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗವನ್ನು ಬಿಗಿದು ಕೊಲೆ ಮಾಡಿ, ನಂತರ ಅದನ್ನು ತಂದು ಗಿಡಗಂಟೆಗಳಿದ್ದ ಜಾಗದಲ್ಲಿ ಕೂಸಿನ ಹೆತ್ತವರೋ, ಸಂಬಂಧಿಗಳೋ ಎಸೆದಿರುವ ಅನುಮಾನಗಳು ಕೇಳಿ ಬಂದಿವೆ. ಸಾಸ್ವೇಹಳ್ಳಿ ಉಪ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿಗಳಾದ ವೀರೇಶ, ಸಿದ್ದೇಶ ಸಹ ಇದೇ ಕ್ಯಾಸಿನಕೆರೆ ಗ್ರಾಮದವರು. ಇದೇ ಆರೋಪಿಗಳ ಊರಿನಲ್ಲಿ ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಿರುವ ಪೈಶಾಚಿಕ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ನವಜಾತ ಶಿಶುವನ್ನು ಕೊಲೆ ಮಾಡಿ, ಬಿಸಾಡಿದ ದುಷ್ಕರ್ಮಿಗಳು, ಕುಟುಂಬಕ್ಕಾಗಿ ಶೋಧ ನಡೆಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.