ಭಾರತ ಚುನಾವಣಾ ಆಯೋಗದ ಆದೇಶದನ್ವಯ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಅಂಗವಾಗಿ ಜಿಲ್ಲೆಯಲ್ಲಿ ಜೂನ್ 30 ರಿಂದ ಮನೆ ಮನೆಗೆ ಭೇಟಿ ಕಾರ್ಯಕ್ರಮ ಪ್ರಾರಂಭವಾಗಿದೆ.
- 1,760 ಭಾಗಗಳಲ್ಲಿ ಮತಗಟ್ಟೆ ಅಧಿಕಾರಿಗಳು ಭೇಟಿ: ಡಿಸಿ ಮಾಹಿತಿ । ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರು
- ಜೂ.30ರ ಮೊದಲ ದಿನ ಜಿಲ್ಲಾದ್ಯಂತ 1,07,802 ಗಣತಿ ನಮೂನೆಗಳ ವಿತರಣೆ: ಜಿ.ಎಂ. ಗಂಗಾಧರ ಸ್ವಾಮಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗದ ಆದೇಶದನ್ವಯ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಅಂಗವಾಗಿ ಜಿಲ್ಲೆಯಲ್ಲಿ ಜೂನ್ 30 ರಿಂದ ಮನೆ ಮನೆಗೆ ಭೇಟಿ ಕಾರ್ಯಕ್ರಮ ಪ್ರಾರಂಭವಾಗಿದೆ.
ಜಿಲ್ಲೆಯ ಒಟ್ಟು 1,760 ಭಾಗಗಳಲ್ಲಿ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಜೂನ್ 16ರ ಪ್ರಸ್ತುತ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದಾರೆ. ಜೂನ್ 30ರ ಮೊದಲ ದಿನದಂದು ಜಿಲ್ಲಾದ್ಯಂತ ಒಟ್ಟು 1,07,802 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 877 ನಮೂನೆಗಳನ್ನು ಈಗಾಗಲೇ ಯಶಸ್ವಿಯಾಗಿ ಗಣಕೀಕರಣ ಮಾಡಲಾಗಿದೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
103-ಜಗಳೂರು ವಿಧಾನಸಭಾ ಕ್ಷೇತ್ರ:
ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 263 ಭಾಗಗಳಿದ್ದು, ದಿನಾಂಕ 16.06.2026ರ ಅಂಕಿ-ಅಂಶಗಳ ಪ್ರಕಾರ ಒಟ್ಟು 2,00,836 ಮತದಾರರಿದ್ದಾರೆ. ವಿಶೇಷ ಜಾಗೃತಿ ಮತ್ತು ಪರಿಷ್ಕರಣಾ ಕಾರ್ಯಕ್ರಮದ ಮೊದಲ ದಿನದಂದು ಈ ಕ್ಷೇತ್ರದಲ್ಲಿ ಬಿಎಲ್ಒ ಅಧಿಕಾರಿಗಳು ಸಾರ್ವಜನಿಕರಿಗೆ ಒಟ್ಟು 14,038 ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ 90 ನಮೂನೆಗಳ ದತ್ತಾಂಶವನ್ನು ಗಣಕೀಕರಣಗೊಳಿಸಲಾಗಿದೆ.
105-ಹರಿಹರ ವಿಧಾನಸಭಾ ಕ್ಷೇತ್ರ:
ಹರಿಹರ ವಿಧಾನಸಭಾ ಕ್ಷೇತ್ರವು ಒಟ್ಟು 228 ಭಾಗಗಳನ್ನು ಒಳಗೊಂಡಿದ್ದು, ಕ್ಷೇತ್ರದಲ್ಲಿ ಜೂನ್ 16 ರ ಸುಮಾರಿಗೆ ಇದ್ದಂತೆ ಒಟ್ಟು 2,11,023 ಮತದಾರರಿದ್ದಾರೆ. ಜೂನ್ 30 ರಂದು ನಡೆದ ಮನೆ-ಮನೆ ಭೇಟಿ ಅಭಿಯಾನದ ಅಡಿಯಲ್ಲಿ ಈ ಕ್ಷೇತ್ರದಲ್ಲಿ ಬರೋಬ್ಬರಿ 28,465 ಗಣತಿ ನಮೂನೆಗಳನ್ನು ನಾಗರಿಕರಿಗೆ ತಲುಪಿಸಲಾಗಿದೆ. ಇದರಲ್ಲಿ ಒಟ್ಟು 83 ನಮೂನೆಗಳ ಡೇಟಾ ಎಂಟ್ರಿ ಹಾಗೂ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ.
106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ:
ಜಿಲ್ಲೆಯ ಅತಿ ಹೆಚ್ಚು ಮತದಾರರಿರುವ ಕ್ಷೇತ್ರಗಳಲ್ಲಿ ಒಂದಾದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 245 ಭಾಗಗಳಿದ್ದು, ಒಟ್ಟು 2,58,718 ಮತದಾರರಿದ್ದಾರೆ. ಪರಿಷ್ಕರಣಾ ಕಾರ್ಯದ ಮೊದಲ ದಿನವಾದ ಇಂದು ಕ್ಷೇತ್ರಾದ್ಯಂತ ಅಧಿಕಾರಿಗಳು ಮನೆ ಮನೆಗೆ ತೆರಳಿ ಒಟ್ಟು 3,135 ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಅದಲ್ಲದೆ, ವಿತರಿಸಲಾದ ನಮೂನೆಗಳ ಪೈಕಿ 110 ನಮೂನೆಗಳನ್ನು ಗಣಕೀಕೃತಗೊಳಿಸಲಾಗಿದೆ.
107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 284 ಭಾಗಗಳನ್ನು ಒಳಗೊಂಡಿದ್ದು, ಇಲ್ಲಿ ಒಟ್ಟು 2,27,996 ಮತದಾರರಿದ್ದಾರೆ. ಮೊದಲ ದಿನದ ಗಣತಿ ನಮೂನೆ ವಿತರಣಾ ಕಾರ್ಯದಲ್ಲಿ ಈ ಕ್ಷೇತ್ರದ ಸಾರ್ವಜನಿಕರಿಗೆ ಒಟ್ಟು 5,508 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ಜೊತೆಗೆ ತಕ್ಷಣದ ಪ್ರಗತಿಯಾಗಿ 160 ಗಣತಿ ನಮೂನೆಗಳನ್ನು ಕಂಪ್ಯೂಟರ್ ವ್ಯವಸ್ಥೆಗೆ ಅಳವಡಿಸಿ ಗಣಕೀಕರಣ ಮಾಡಲಾಗಿದೆ.
108-ಮಾಯಕೊಂಡ ವಿಧಾನಸಭಾ ಕ್ಷೇತ್ರ:
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 240 ಭಾಗಗಳಿದ್ದು, ಜೂನ್ 16ಕ್ಕೆ ಇದ್ದಂತೆ ಒಟ್ಟು 1,97,048 ಮತದಾರರು ನೋಂದಾಯಿತರಾಗಿದ್ದಾರೆ. ಜೂನ್ 30 ರಂದು ನಡೆದ ವಿಶೇಷ ಪರಿಷ್ಕರಣಾ ಕಾರ್ಯದಲ್ಲಿ ಅತ್ಯುತ್ತಮ ಪ್ರಗತಿಯೊಂದಿಗೆ ಕ್ಷೇತ್ರದಲ್ಲಿ 15,172 ಗಣತಿ ನಮೂನೆಗಳನ್ನು ಜನರಿಗೆ ವಿತರಿಸಲಾಗಿದೆ. ವಿತರಣೆಯ ಜೊತೆಗೆ ಪ್ರಸ್ತುತ 189 ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಲಾಗಿದೆ.
109-ಚನ್ನಗಿರಿ ವಿಧಾನಸಭಾ ಕ್ಷೇತ್ರ:
ಚನ್ನಗಿರಿ ವಿಧಾನಸಭಾ ಕ್ಷೇತ್ರವು ಒಟ್ಟು 255 ಭಾಗಗಳನ್ನು ಹೊಂದಿದ್ದು, ಇಲ್ಲಿ ಒಟ್ಟು 2,03,628 ಮತದಾರರಿದ್ದಾರೆ. ಜೂನ್ 30 ರಂದು ಬಿ.ಎಲ್.ಒಗಳು ನಡೆಸಿದ ಚುರುಕಿನ ಕಾರ್ಯಾಚರಣೆಯ ಮೂಲಕ ಕ್ಷೇತ್ರದಲ್ಲಿ ಮೊದಲ ದಿನವೇ ಒಟ್ಟು 19,088 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇವುಗಳ ಪೈಕಿ 189 ನಮೂನೆಗಳನ್ನು ಗಣಕೀಕರಣ ಪ್ರಕ್ರಿಯೆಗೆ ಒಳಪಡಿಸಲಾಗಿದೆ.
110-ಹೊನ್ನಾಳಿ ವಿಧಾನಸಭಾ ಕ್ಷೇತ್ರ:
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 245 ಭಾಗಗಳಿದ್ದು, ಕ್ಷೇತ್ರದಲ್ಲಿ ಜೂನ್ 16ರ ವೇಳೆಗೆ ಇದ್ದಂತೆ ಒಟ್ಟು 2,00,033 ಮತದಾರರಿದ್ದಾರೆ. ಪರಿಷ್ಕರಣೆಯ ಆರಂಭಿಕ ದಿನದಂದು ಅಧಿಕಾರಿಗಳು ಕ್ಷೇತ್ರಾದ್ಯಂತ 22,396 ಗಣತಿ ನಮೂನೆಗಳನ್ನು ಯಶಸ್ವಿಯಾಗಿ ಸಾರ್ವಜನಿಕರಿಗೆ ವಿತರಿಸಿದ್ದಾರೆ. ಜೊತೆಗೆ ಆರಂಭಿಕ ಹಂತವಾಗಿ 56 ನಮೂನೆಗಳ ಗಣಕೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.
ಮನೆ ಮನೆಗೆ ಭೇಟಿಯ ಈ ಪ್ರಕ್ರಿಯೆಯು ಜುಲೈ 29 ರವರೆಗೆ ನಿರಂತರವಾಗಿ ನಡೆಯಲಿದ್ದು, ಅರ್ಹ ನಾಗರಿಕರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ಮತದಾರರ ಪಟ್ಟಿಯ ನಿಖರತೆಗೆ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.