ಕನ್ನಡಪ್ರಭ ವಾರ್ತೆ ಬೆಂಗಳೂರು
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎಸ್‌ಐಆರ್‌ನಿಂದ ದೇಶದಲ್ಲಿ ಸಾಕಷ್ಟು ಅನಾಹುತಗಳಾಗುತ್ತಿವೆ. ಅದಕ್ಕಾಗಿ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡ ಮತ್ತು ಸಾಮಾನ್ಯ ಜನರಿಗೆ ಎಸ್‌ಐಆರ್ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ. ಕೆಲ ರಾಜ್ಯಗಳಲ್ಲಿ 50ರಿಂದ 90 ಲಕ್ಷದವರೆಗೆ ಮತಗಳನ್ನು ತೆಗೆದುಹಾಕಲಾಗಿದೆ. ನಮ್ಮಲ್ಲೂ ಎಸ್‌ಐಆರ್ ಆರಂಭವಾಗುತ್ತಿದ್ದು, ಅದಕ್ಕಾಗಿ ಎಚ್ಚರಿಕೆ ವಹಿಸಬೇಕಿದೆ ಎಂದರು.
ಜನರು ಚುನಾವಣಾ ಆಯೋಗ ನೀಡುವ ಅರ್ಜಿ ತುಂಬಿಸಿ ದಾಖಲೆ ಸಹಿತ ವಾಪಾಸ್ ನೀಡಿದವರ ಮತ ಮಾತ್ರ ಉಳಿಯುತ್ತದೆ. ಅರ್ಜಿ ವಾಪಸ್ ನೀಡದವರ ಮತ ಹಕ್ಕು ನಷ್ಟವಾಗಲಿದೆ. ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದಿಂದ ದೊರೆಯುವ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆ ದೃಷ್ಟಿಯಿಂದ ಮತ ಹಕ್ಕು ಕಳೆದುಕೊಳ್ಳದಂತೆ ಮಾಡಲು ಸರ್ಕಾರ ಜನರಿಗೆ ಬೇಕಾಗುವ ದಾಖಲೆ ಒದಗಿಸಲಿದೆ. ಇದು ಜವಾಬ್ದಾರಿಯುತ ಸರ್ಕಾರದ ಕೆಲಸವಾಗಿದೆ ಎಂದು ಹೇಳಿದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷಗಳ ಬಿಎಲ್‌ಎಗಳಿಗೆ ತರಬೇತಿ ನೀಡುತ್ತಿವೆ. ನಮ್ಮಿಂದ ಹಾಗೂ ಸರ್ಕಾರದಿಂದ ಏನೂ ತೊಂದರೆಯಾಗಬಾರದು ಎಲ್ಲರಿಗೂ ನ್ಯಾಯ ಒದಗಿಸಬೇಕು ಎನ್ನುವುದು ನನ್ನ ಆಶಯ. ಚುನಾವಣೆ ಗೆಲ್ಲುವುದು, ಬಿಡುವುದು ಬೇರೆ ವಿಚಾರ. ಮತ ಹಕ್ಕು ಕಳೆದು ಯೋಜನೆ ಸೌಲಭ್ಯ ಸಿಗದಿದ್ದರೆ ಆಗ ಚುನಾವಣಾ ಆಯೋಗ ಮಾಡಿದೆ ಎಂದು ಹೇಳುವುದಿಲ್ಲ. ನಮ್ಮನ್ನೇ ಜನರು ಪ್ರಶ್ನಿಸುತ್ತಾರೆ ಎಂದರು.ಪಕ್ಷದೊಳಗೆ ಯಾವ ಗೊಂದಲವೂ ಇಲ್ಲ. ಪಕ್ಷವಿದ್ದರೆ ನೀನು. ನಂತರ ಸ್ಥಾನಮಾನ. ಮೊದಲು ಪಕ್ಷ ಇರಬೇಕು ನಂತರ ಮಿಕ್ಕಿದ್ದೆಲ್ಲ ಸ್ಥಾನಮಾನ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.