ಚುನಾವಣಾ ಆಯೋಗದ ಆದೇಶಕ್ಕೂ ಮೊದಲೇ ರಾಜ್ಯದಲ್ಲಿ ಎಸ್ಐಆರ್!

KannadaprabhaNewsNetwork |  
Published : Dec 19, 2025, 02:30 AM IST
5446 | Kannada Prabha

ಸಾರಾಂಶ

ಕೇಂದ್ರ ಚುನಾವಣಾ ಆಯೋಗ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಆರಂಭಿಸಿದ್ದು, ರಾಜ್ಯದಲ್ಲಿ ಅಧಿಕೃತವಾಗಿ ಎಸ್ಐಆರ್ ಆರಂಭಿಸಿಲ್ಲ. ಆದರೂ, ರಾಜ್ಯ ಚುನಾವಣಾ ಆಯೋಗ ಆದೇಶ ಮಾಡಿದ ನಂತರ ಗಡಿಬಿಡಿ ಅಥವಾ ಗೊಂದಲ ಆಗದಿರಲಿ ಎಂದು ಈಗಾಗಲೇ ಎಸ್ಐಆರ್ ಕಾರ್ಯ ಆರಂಭಿಸಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ:

ಈಗಾಗಲೇ 3 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ ಸೇರಿ 5 ಕಡೆ ಮತದಾರ ಪಟ್ಟಿ "ವಿಶೇಷ ತೀವ್ರ ಪರಿಷ್ಕರಣೆ " ಕಾರ್ಯ ನಡೆದಿದೆ. ಆದರೆ, ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡುವ ಮೊದಲೇ ಎಸ್ಐಆರ್ ಕಾರ್ಯ ಜೋರಾಗಿ ನಡೆದಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಎಲ್ಒಗಳು ತಮ್ಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಕೇಂದ್ರ ಚುನಾವಣಾ ಆಯೋಗ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ಆರಂಭಿಸಿದ್ದು, ರಾಜ್ಯದಲ್ಲಿ ಅಧಿಕೃತವಾಗಿ ಎಸ್ಐಆರ್ ಆರಂಭಿಸಿಲ್ಲ. ಆದರೂ, ರಾಜ್ಯ ಚುನಾವಣಾ ಆಯೋಗ ಆದೇಶ ಮಾಡಿದ ನಂತರ ಗಡಿಬಿಡಿ ಅಥವಾ ಗೊಂದಲ ಆಗದಿರಲಿ ಎಂದು ಈಗಾಗಲೇ ಎಸ್ಐಆರ್ ಕಾರ್ಯ ಆರಂಭಿಸಿದೆ.ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಮತ್ತು ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ಖಚಿತಪಡಿಸುವುದು ಈ ಪರಿಷ್ಕರಣೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲೇ ನಗರಗಳು ಮತ್ತು ಹಳ್ಳಿಗಳಲ್ಲಿ 58,000 ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ಕುಂದಗೋಳ ತಾಲೂಕು ಶೇ. 75ರಷ್ಟು ಪರಿಷ್ಕರಣೆ ಮಾಡಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ನವಲಗುಂದ ತಾಲೂಕಿನಲ್ಲಿ ಶೇ. 74 ಮತ್ತು ಕಲಘಟಗಿ ಶೇ.72ರಷ್ಟು ಪರಿಷ್ಕರಣೆಯಾಗಿದೆ. ಉಳಿದ ತಾಲೂಕುಗಳಲ್ಲೂ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ನವಲಗುಂದ ತಾಲೂಕಿನಲ್ಲಿ 105 ಬಿಎಲ್ಒಗಳು ಶೇ. 74ರಷ್ಟು ಕಾರ್ಯ ಪೂರ್ಣಗೊಳಿಸಿದ್ದಾರೆ. ಸದ್ಯ ಯಾವುದೇ ಮತದಾರರ ಹೆಸರನ್ನು ಅಳಿಸುವ ಕಾರ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕರ್ನಾಟಕದಲ್ಲಿ 2002ರಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗಿತ್ತು. 2002ರಲ್ಲಿ 3.4 ಕೋಟಿ ಮತದಾರರಿದ್ದರು. ಈ ಸಂಖ್ಯೆ ಇದೀಗ 5.4 ಕೋಟಿಯಾಗಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಪ್ರಸ್ತುತ 2025ರ ಡೇಟಾವನ್ನು 2002ರ ಡೇಟಾದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.ಬ್ಲಾಕ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಾರೆ, ವಿಶಿಷ್ಟ ಕ್ಯೂಆರ್ (QR) ಕೋಡ್‌ಗಳೊಂದಿಗೆ ಪೂರ್ವ ಭರ್ತಿ ಮಾಡಿದ ಎರಡು ಫಾರ್ಮ್‌ಗಳ ಸಹಾಯದೊಂದಿಗೆ ಪ್ರತಿ ಮತದಾರರನ್ನು ಪರಿಶೀಲಿಸುತ್ತಾರೆ. ಮತದಾರರು ತಮ್ಮ ಸ್ಥಳ ಅಥವಾ ಜನ್ಮ ದಿನಾಂಕವನ್ನು ಖಚಿತಪಡಿಸಲು ಆಧಾರ್ ಕಾರ್ಡ್ ಸೇರಿದಂತೆ 12 ಪಟ್ಟಿ ಮಾಡಲಾದ ದಾಖಲೆಗಳಲ್ಲಿ ಒಂದನ್ನು ಒದಗಿಸಬೇಕು.ಪರಿಶೀಲನೆಯ ನಂತರ, ಬ್ಲಾಕ್ ಮಟ್ಟದ ಅಧಿಕಾರಿಗಳು ಸಹಿ ಮಾಡಿದ ಒಂದು ಫಾರ್ಮ್ ಅನ್ನು ಮತದಾರರಿಗೆ ಸ್ವೀಕೃತಿಯಾಗಿ ಹಸ್ತಾಂತರಿಸುತ್ತಾರೆ. ಇನ್ನೊಂದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತಾರೆ. ಅದನ್ನು ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ವೇಳೆ ಘೋಷಣಾ ನಮೂನೆಗೆ ಸಹಿ ಹಾಕುವುದು ಕಡ್ಡಾಯವಾಗಿದ್ದು, ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.ತಂತ್ರಜ್ಞಾನವನ್ನು ಬಳಸಿಕೊಂಡು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿದವರನ್ನು ಗುರುತಿಸಲಾಗುತ್ತಿದೆ. ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿದ ನಂತರ ಗೈರುಹಾಜರಾದವರು, ಸತ್ತವರು ಮತ್ತು ವಲಸೆ ಬಂದವರು, ನಕಲುಗಳನ್ನು ಪಟ್ಟಿ ಮಾಡುತ್ತಾರೆ. ಬಳಿಕ ಅವುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಸಿಇಒ ಪರಿಶೀಲನೆಯ ನಂತರ, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಇದರ ನಂತರ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಎಸ್‌ಐಆರ್‌ಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ. ವೋಟರ್ ಮ್ಯಾಪಿಂಗ್‌ ಮಾಡುವ ಸೂಚನೆ ಇದೆ. ಅದರಂತೆ ಮ್ಯಾಪಿಂಗ್‌ ಕಾರ್ಯ ನಡೆದಿದೆ. ಎಸ್‌ಐಆರ್‌ ನೋಟಿಫಿಕೇಶನ್ ಬಂದ ಮೇಲೆ ಆ ಪ್ರಕ್ರಿಯೆ ಆರಂಭಿಸಲಾಗುವುದು. ಈಗ ಮತದಾರರ ಚೀಟಿ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ.

ದಿವ್ಯಪ್ರಭು, ಧಾರವಾಡ ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು