- ತರೀಕೆರೆಯಲ್ಲಿ 9ನೇ ವರ್ಷದ ಎಂಜಿನಿಯರ್ಸ್ ದಿನಾಚರಣೆ
ಕನ್ನಡಪ್ರಭ ವಾರ್ತೆ, ತರೀಕೆರೆಸರ್ವ ಶ್ರೇಷ್ಠ ತಾಂತ್ರಿಕ ಪರಿಣಿತರು ಸರ್.ಎಂ.ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟೆ ಇನ್ನಿತರೆ ಜಲಾಶಯ ನಿರ್ಮಿಸುವ ಮೂಲಕ ನೀರಾವರಿಗೆ ಅದ್ಯತೆ ನೀಡಿ ರೈತರ ಬದುಕು ಹಸನಾಗಿಸಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತರೀಕೆರೆ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ನಿಂದ ಸೋಮವಾರ ಪಟ್ಟಣದ ಐಬಿ ಆವರಣದಲ್ಲಿ ಏರ್ಪಾಡಾಗಿದ್ದ 9ನೇ ವರ್ಷದ ಎಂಜಿನಿಯರ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೈಸೂರು ಅರಸರು ಸರ್.ಎಂ.ವಿಶ್ವೇಶ್ವರಯ್ಯ ಅವರ ಕಾರ್ಯಕ್ಷಮತೆ ಮೆಚ್ಚಿ ದಿವಾನ ಸ್ಥಾನ ನೀಡಿದ್ದನ್ನು ಸಮರ್ಪಕ ವಾಗಿ ಬಳಸಿಕೊಂಡ ಅವರು ಉತ್ತಮ ಆಡಳಿತ ನಡೆಸಿ ನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡಿದ್ದಾರೆ. ಇಂದಿನ ತಲೆ ಮಾರಿನ ಎಂಜಿನಿಯರ್‌ಗಳು ಸರ್‌ಎಂವಿ ಹಾದಿಯಲ್ಲಿ ಸಾಗಿ ಹೊಸ ಹೊಸ ಆವಿಷ್ಕಾರಕ್ಕೆ ಮುನ್ನುಡಿ ಬರೆಯಬೇಕು ಎಂದುಹೇಳಿದರು.ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಮಾತನಾಡಿ, ಸರ್.ಎಂವಿ ವ್ಯಕ್ತಿತ್ವ ಸರಳ ಮಾತ್ರವಲ್ಲ, ಇತರರಿಗೆ ಪ್ರೇರಣೆ ನೀಡುವಂಥದ್ದು. ಸಣ್ಣದಾಗಲಿ ಅಥವಾ ದೊಡ್ಡದಾಗಲಿ ಯಾವುದೇ ಕೆಲಸ ಮಾಡಿದರೂ, ಶ್ರದ್ಧೆ ವಹಿಸಬೇಕು ಎಂಬ ಭಾವನೆ ಹೊಂದಿದ್ದರು. ತತ್ವ ಸಿದ್ಧಾಂತಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಎಂಜಿನಿಯರ್ಸ್ ಗಳು ವಿನ್ಯಾಸದಲ್ಲಿ , ಕಟ್ಟಡ ನಿರ್ಮಾಣದಲ್ಲಿ ತಪ್ಪುಆಗದಂತೆ ನೋಡಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುವ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು. ಚಿಕ್ಕಮಗಳೂರು ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ವಿಶ್ವೇಶ್ವರಯ್ಯನವರಂಥ ಮಕ್ಕಳು ಬೇಕು ಸಮೃದ್ಧ ರಾಷ್ಟ್ರ ಕಟ್ಟಲು. ಬಹುದೊಡ್ಡ ಸಾಧನೆ ಮಾಡಿರುವ ಅವರ ಒಂದೊಂದು ಹೆಜ್ಜೆಯೂ ವಿಶೇಷ, ವಿಭಿನ್ನ. ಯಾವತ್ತಿಗೂ ಮೌಲ್ಯದ ಜತೆ ನಿಂತಿದ್ದ ಸರ್‌ಎಂವಿ ಶ್ರೇಷ್ಠ ತಾಂತ್ರಿಕ ಪರಿಣಿತರು ಮಾತ್ರವಲ್ಲ, ಉತ್ತಮ ಆರ್ಥಿಕ ತಜ್ಞ ಸಹ ಆಗಿದ್ದರು. ಇದಕ್ಕೆ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಸಾಕ್ಷಿ ಎಂದು ಹೇಳಿದರು.ವಚನ ಸಂಸ್ಕೃತಿ ಭೋದಿಸಿದಂತೆ ಬದುಕಿ ತೋರಿಸಿದ ಸರ್ ಎಂವಿ ಅವರ ಪ್ರಭಾವ ಜಾನಪದರ ತಲೆಯಲ್ಲಿ ಹಾಸು ಕೊಕ್ಕಾಗಿದೆ. ಎಂಜಿನಿಯರ್‌ಗಳ ಮುಂದಿನ ಭವಿಷ್ಯ ಕವಲು ದಾರಿಯಲ್ಲಿ ಇರುವ ಪರಿಣಾಮ ಜಾಗೃತರಾಗಿ ವಿವಿಧ ತಾಂತ್ರಿಕ ಆವಿಷ್ಕಾರ ನಡೆಸುವ ಅನಿವಾರ್ಯತೆ ಎದುರಾಗಿದೆ. ಇಂಥ ಸಂದರ್ಭದಲ್ಲಿ ಮಹಾನೀಯರ ಗುಣ ಮೌಲ್ಯ ಜೀವನ ದಲ್ಲಿ ಅಳವಡಿಸಿಕೊಂಡು ಜನ ಒಪ್ಪುವ ಹಾಗೆ ಪಾತ್ರ ನಿರ್ವಹಿಸಬೇಕಿದೆ ಎಂದು ಹೇಳಿದರು.ಪಟ್ಟಣದ ಜ್ಞಾನ ದೇಗುಲ ಶಾಲೆ ಮಕ್ಕಳು ಪ್ರದರ್ಶಿಸಿದ ನೃತ್ಯ ರೂಪಕಗಳು ದಿನಾಚರಣೆಯನ್ನು ಆಕರ್ಷಣೀಯಗೊಳಿಸಿತು. ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಮುಖ್ಯಾಧಿಕಾರಿ ಟಿ.ಒ. ವಿಜಯಕುಮಾರ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ. ನವೀನ್‌ನಾಯ್ಕ್, ಗೌರವಾಧ್ಯಕ್ಷ ಟಿ.ಆರ್.ಮುರಳಿ, ಉಪಾಧ್ಯಕ್ಷ ವಸಂತ್‌ಕುಮಾರ್, ಸದಸ್ಯರಾದ ಕೆ.ಎಂ.ಚಂದ್ರಶೇಖರ್, ಎಚ್.ಸಿ.ಗೋಪಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.-
15ಕೆಟಿಅರ್.ಕೆ.8ಃತರೀಕೆರೆಯಲ್ಲಿ ನಡೆದ ಎಂಜಿನಿಯರ್ಸ್ ದಿನಾಚರಣೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಸಾಹಿತಿ ಚಟ್ನಳ್ಳಿ ಮಹೇಶ್, ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ. ನವೀನ್‌ನಾಯ್ಕ್ ಮತ್ತಿತರರು ಇದ್ದರು.