ನಾರಾಯಣ ಹೆಗಡೆ
ಮತದಾರರ ಪಟ್ಟಿಯಲ್ಲಿನ ಅನರ್ಹ ಹಾಗೂ ಅಸ್ತಿತ್ವದಲ್ಲಿ ಇಲ್ಲದ ಹೆಸರುಗಳನ್ನು ಗುರುತಿಸಿ ತೆಗೆದುಹಾಕುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಹಾವೇರಿ ಜಿಲ್ಲೆಯಲ್ಲಿ ಬರೋಬ್ಬರಿ 1,15,066 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಹಾಗೂ ಇತರ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗುತ್ತಿದೆ.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಆ.17ರಂದು ಎಸ್‌ಐಆರ್ ಪ್ರಕ್ರಿಯೆಗೆ ಕೊನೆಯ ದಿನವಾಗಿದ್ದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಜೆ 4 ಗಂಟೆಯವರೆಗೆ ಒಟ್ಟು 12,20,276 ಮತದಾರರ ವಿವರಗಳನ್ನು ಗಣಕೀಕರಣಗೊಳಿಸಲಾಗಿದೆ.ಜಿಲ್ಲೆಯಲ್ಲಿ ಜೂ.16, 2026ರ ವೇಳೆಗೆ ಒಟ್ಟು 13,35,342 ಮತದಾರರು ಇದ್ದರು. ಇವರ ಪೈಕಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ 1,15,066 ಹೆಸರುಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿವೆ. ಇದು ಜಿಲ್ಲೆಯ ಒಟ್ಟು ಮತದಾರರ ಪೈಕಿ ಸುಮಾರು ಶೇ.8.6ರಷ್ಟು ಎಂಬುದು ಗಮನಾರ್ಹವಾಗಿದೆ.
ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿರುವ 1,15,066 ಹೆಸರುಗಳಲ್ಲಿ ಮರಣ ಹೊಂದಿದವರ ಸಂಖ್ಯೆ 32,357 ಆಗಿದೆ. ಅಂದರೆ, ಮೃತಪಟ್ಟಿದ್ದರೂ ಮತದಾರರ ಪಟ್ಟಿಯಲ್ಲಿ ಮುಂದುವರಿದಿದ್ದ ಇಷ್ಟೊಂದು ಹೆಸರುಗಳನ್ನು ಗುರುತಿಸಲಾಗಿದೆ.
ಅದೇ ರೀತಿ ದ್ವಿಪ್ರತಿ ಮತದಾರರ 17,104 ಹೆಸರುಗಳನ್ನು ಗುರುತಿಸಲಾಗಿದೆ. ಒಂದೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪರಿಶೀಲಿಸಿ ದ್ವಿಪ್ರತಿ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಶೇ.8.6ರಷ್ಟು ಹೆಸರು ಹೊರಕ್ಕೆ
ಇದೀಗ ಎಸ್‌ಐಆರ್ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ಪ್ರಕಟವಾಗುವ ಪರಿಷ್ಕೃತ ಮತದಾರರ ಪಟ್ಟಿಯತ್ತ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರ ಗಮನ ನೆಟ್ಟಿದೆ. ವಿಶೇಷವಾಗಿ ಶಾಶ್ವತ ವಲಸೆ, ದ್ವಿಪ್ರತಿ ಹಾಗೂ ಸಂಗ್ರಹವಾಗದ/ಗೈರು ಎಂದು ಗುರುತಿಸಲಾದ ಹೆಸರುಗಳ ಕುರಿತು ಸಂಬಂಧಪಟ್ಟವರು ಪರಿಶೀಲನೆ ನಡೆಸುವುದು ಮಹತ್ವದ್ದಾಗಿದೆ.
ಮತದಾರರ ಪಟ್ಟಿಯಲ್ಲಿನ ಹೆಸರುಗಳ ಶುದ್ಧೀಕರಣವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದ್ದು, ಒಂದೇ ವ್ಯಕ್ತಿಯ ಹೆಸರು ಹಲವು ಕಡೆ ದಾಖಲಾಗಿರುವುದು, ಮೃತಪಟ್ಟವರ ಹೆಸರುಗಳು ಮುಂದುವರಿದಿರುವುದು ಹಾಗೂ ಶಾಶ್ವತವಾಗಿ ವಲಸೆ ಹೋದವರ ಹೆಸರುಗಳು ಪಟ್ಟಿಯಲ್ಲಿ ಉಳಿದಿರುವುದನ್ನು ಗುರುತಿಸಲು ಎಸ್‌ಐಆರ್ ನೆರವಾಗಿದೆ.
ಕಾರಣ ಸಂಖ್ಯೆ
ಮರಣ- 32,357ಸಂಗ್ರಹವಾಗದ,ಗೈರು- 5,458
ಶಾಶ್ವತ ವಲಸೆ- 59,902ದ್ವಿಪ್ರತಿ- 17,104
ಇತರೆ- 245ಒಟ್ಟು- 1,15,066
ಪಾರದರ್ಶಕತೆಗೆ ವೆಬ್‌ಸೈಟ್‌ನಲ್ಲಿ ವಿವರಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ವಿಧಾನಸಭಾವಾರು ಹಾಗೂ ಮತಗಟ್ಟೆವಾರು ಮತದಾರರ ವಿವರಗಳನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ತಮ್ಮ ಹೆಸರು ಇರುವ ಬಗ್ಗೆ ವೆಬ್‌ಸೈಟ್ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.