ಮಡಿಕೇರಿ: ದೇಶದಲ್ಲಿ ಎಸ್‌ಐಆರ್ ಬಗ್ಗೆ ಆಂದೋಲನ ಮಾಡಲಾಗುತ್ತಿದೆ. ಎಸ್‌ಐಆರ್ ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ನೈಜ ಮತದಾರರಿಗೆ ಮತದಾನದ ಹಕ್ಕು ದೊರೆಯಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದ್ದಾರೆ.
ಈ ಸಂದರ್ಭ ಮಾತನಾಡಿದ ಧರ್ಮಜ ಉತ್ತಪ್ಪ, ಪಶ್ಚಿಮ ಬಂಗಾಲದಲ್ಲಿ ಶೇ.80ರಷ್ಟು ನೈಜ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ವಿರುದ್ಧ ಕೇಂದ್ರದಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದ್ದು, ಎಲ್ಲಾ ರಾಜ್ಯದ ಶಾಸಕರು, ಸಂಸದರು ದೆಹಲಿಗೆ ತೆರಳಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಯುವಸಮೂಹ ಕೂಡ ಮತದಾನದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು, ಈ ಹೋರಾಟಕ್ಕೆ ಬೆಂಬಲವಾಗಿ ಇಲ್ಲಿಯೂ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಜ್ಞಾನೇಶ್‌ಕುಮಾರ್ ಎಂಬ ವ್ಯಕ್ತಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಈಗಾಗಲೇ ಹಲವು ಹೋರಾಟಗಳು ನಡೆದಿದ್ದರೂ ಚುನಾವಣಾ ಆಯೋಗ ಜನರ ಆಳಲನ್ನು ಕೇಳುತ್ತಿಲ್ಲ. ಈ ಎಸ್‌ಐಆರ್‌ನ್ನು ಪೂರ್ತಿ ರದ್ದು ಮಾಡಿ ಸೂಕ್ತ ರೀತಿಯಲ್ಲಿ, ಮತದಾನದ ಹಕ್ಕು ನೀಡುವಲ್ಲಿ ಲೋಪದೋಷ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಚುನಾವಣಾ ಆಯೋಗ ಸ್ವತಂತ್ರ್ಯ ವ್ಯವಸ್ಥೆ ತೋರ್ಪಡಿಸಬೇಕು. ಅದನ್ನು ಬಿಟ್ಟು ಮೋದಿ, ಅಮಿತ್ ಶಾ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ. ಜ್ಞಾನೇಶ್‌ಕುಮಾರ್ ಅವರ ಏಕಪಕ್ಷೀಯ ನಿರ್ಧಾರಕ್ಕೆ ಆ ಸಮಿತಿಯವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಮತದಾನದ ಹಕ್ಕು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ವಕ್ತಾರ ತೆನ್ನೀರಾ ಮೈನಾ, ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಅಬ್ದುಲ್ ರಜಾಕ್, ಇಸ್ಮಾಯಿಲ್, ಸೂರಜ್ ಹೊಸೂರು, ಲೀಲಾ ಶೇಷಮ್ಮ, ಮಿನಾಜ್ ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.