ಬಂಟ್ವಾಳ : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಭಾರತ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ರಕ್ಷಿಸಬೇಕು, ಎಸ್‌ಐಆರ್ (Special Intensive Revision) ಪ್ರಕ್ರಿಯೆಯನ್ನು ನಿಲ್ಲಿಸಿ ಕೈಬಿಟ್ಟಿರುವ ಮತದಾರರನ್ನು ಪುನಃ ಮತದಾರರ ಪಟ್ಟಿಗೆ ಸೇರಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿ ಸಿಪಿಐಎಂಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ. ಮಾತನಾಡಿ, ಎಸ್‌ಐಆರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಆರ್‌ವೈಎ ರಾಜ್ಯ ಸಹ ಸಂಚಾಲಕ ಮಹಮ್ಮದ್ ಲುಕ್ಮಾನ್ ಕೆ.ಎಂ. ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ಅಸಮರ್ಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನಕರ ಸಂಗತಿ ಎಂದು ಹೇಳಿದರು.ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಅದನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ದೇಶಾದ್ಯಂತ ಪ್ರಬಲ ಹೋರಾಟ ರೂಪುಗೊಳ್ಳಲಿದೆ. ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳ್ಳುವ ಹಾಗೂ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡುವವರೆಗೆ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.ಪ್ರತಿಭಟನೆಯ ಆರಂಭದಲ್ಲಿ ಸಿಪಿಐಎಂಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರಾದ ಸಜೇಶ್ ವಿಟ್ಲ, ಮಹಮ್ಮದ್ ಮುಂಝಿರ್, ಸುಹೈಲ್, ತಾಲೂಕು ಸಮಿತಿ ಸದಸ್ಯರಾದ ಡೆನ್ನಿಸ್ ಡಿ.ಸೋಜ, ವಸಂತ ಗಟ್ಟಿ, ಜಾನ್ ಡಿ.ಸೋಜ, ಮಹಮ್ಮದ್ ಹಪೀಝ್ ಎ.ಕೆ., ರಾಜೇಶ್ ಶೆಟ್ಟಿ, ಕುಂಞಪ್ಪ ಮೂಲ್ಯ ಹಾಗೂ ಎಐಸಿಸಿಟಿಯು ಮುಖಂಡರಾದ ಶೌಕತ್ ಆಲಿ ಖಾನ್, ಅಚ್ಯುತ ಕಟ್ಟೆ, ಮಾರ್ಟಿನ್ ಬಂಟ್ವಾಳ ಮತ್ತಿತರರು ವಹಿಸಿದ್ದರು.