ಶಿರಾ: ನಾಳೆಯಿಂದ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 24, 2024, 02:01 AM IST
23ಶಿರಾ2: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿರುವ ಶ್ರೀ ಓಂಕಾರೇಶ್ವರ ಸ್ವಾಮಿ. | Kannada Prabha

ಸಾರಾಂಶ

ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಜ. ೨೫ ರಿಂದ ಫೆ. ೬ ರವರೆಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮಕ್ಷಮದಲ್ಲಿ ವೈಭವಯುತವಾಗಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಜ. ೨೫ ರಿಂದ ಫೆ. ೬ ರವರೆಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮಕ್ಷಮದಲ್ಲಿ ವೈಭವಯುತವಾಗಿ ನಡೆಯಲಿದೆ.

ಜ. ೨೫ ಗುರುವಾರ ಗಂಗಾಪೂಜೆ, ಜ. ೨೬ ಶುಕ್ರವಾರ ಬೆಳಗ್ಗೆ ಕಳಸ ಸ್ಥಾಪನೆ, ಜ.೨೭ ಹೂವಿನ ತೇರು, ಜ.೨೮ ಕೈಲಾಸೋತ್ಸವ, ಜ.೨೯ ನಂದೀಶ್ವರ ಉತ್ಸವ, ಜ.೩೦.ರ ಮಂಗಳವಾರ ರಾತ್ರಿ ಮಡಿತೇರು ಉತ್ಸವ ನಡೆಯಲಿದೆ.

೨೧ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ: ಜ.೩೧ ರ ಬುಧವಾರ ಸಂಜೆ ೬ ಗಂಟೆಗೆ ರೈತರಿಗೆ ನೂತನ ತಾಂತ್ರಿಕತೆಯ ಕೃಷಿ ಬಗ್ಗೆ ಪ್ರಾತ್ಯಕ್ಷಿಕ ಬೆಳೆಗಳು ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಮಳಿಗೆಗಳನ್ನೊಳಗೊಂಡ ೨೧ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಸರ್ಕಾರದ ಮಂತ್ರಿಗಳು ಹಾಗೂ ಗಣ್ಯರು ಉದ್ಘಾಟನೆಗೊಳಿಸಲಿದ್ದಾರೆ. ರಾತ್ರಿ ೧೧ ಗಂಟೆಗೆ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ವಿಜೃಂಭಣೆಯಿಂದ ನೆರವೇರಲಿದ್ದು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಾವಿರಾರು ಭಕ್ತರು ಶ್ರೀ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗಲಿದ್ದಾರೆ.BOX

ನಂಜಾವಧೂತ ಶ್ರೀಗಳ ನೀರಾವರಿ ಹಕ್ಕೊತ್ತಾಯಕ್ಕೆ ೨೫ ವರ್ಷ

ಬರದ ಬೇಗೆಗೆ ತತ್ತರಿಸಿದ್ದ ಬಯಲುಸೀಮೆಗೆ ಯಾರೂ ಊಹಿಸದ, ಯೋಚಿಸದ ನೀರಾವರಿ ವಿಷಯವನ್ನು ಸಾರ್ವಜನಿಕವಾಗಿ ಮೊಟ್ಟಮೊದಲ ಬಾರಿಗೆ ಪ್ರಸ್ತಾಪಿಸಿ ಅದನ್ನು ಅನುಷ್ಠಾನಕ್ಕೆ ತರಲು ಪ್ರೇರಕ ಶಕ್ತಿಯಾಗಿ ನಿಂತಿದ್ದು, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ನಂಜಾವಧೂತ ಸ್ವಾಮೀಜಿ ಅವರ ನಿಲುವಿಗೆ ಇದೀಗ ಭರ್ತಿ ಇಪ್ಪತ್ತೈದು ವರ್ಷ.

ಬಯಲು ಸೀಮೆಯ ಧಣಿವಿಗೆ ಅಸರೆಯಾಗಿ ಯಾವುದಾದರೂ ಜಲಮೂಲ ಬೇಕೆಂಬ ಆಶಯವನ್ನು ನಂಜಾವಧೂತ ಶ್ರೀಗಳು ಭಕ್ತ ಸಮೂಹದ ಮುಂದೆ ವಿಷಯವನ್ನು ಮುಂದಿಟ್ಟಾಗ ಇದು ಆಗುವ ಮಾತೇ, ಸ್ವಾಮೀಜಿಯವರು ಕಾಲಹರಣ ಮಾಡಲು ಇಂತಹ ವಿಷಯವನ್ನು ಹೇಳುತ್ತಿದ್ದಾರೆ ಎಂದು ಕುಹಕವಾಡಿದ ಮಂದಿ ಇಂದು ಅಚ್ಚರಿ ಎಂಬಂತೆ ಸ್ವಾಮೀಜಿಯವರ ದೂರದೃಷ್ಟಿಯ ಬಗ್ಗೆ ಮಾತನ್ನಾಡುತ್ತಿದ್ದಾರೆ. ಬಯಲುಸೀಮೆಯ ಒಡಲು ಇದೀಗ ಹೇಮಾವತಿ, ಭದ್ರೆ, ತುಂಗೆ, ಎತ್ತಿನಹೊಳೆ ನೀರಿನಲ್ಲಿ ಮಿಂದೇಳುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಕೆ.ಸಿ ವ್ಯಾಲಿ, ಎತ್ತಿನಹೊಳೆ, ತುಮಕೂರು ಭಾಗಕ್ಕೆ ಹೇಮಾವತಿ ,ಅಪ್ಪರ್ ಭದ್ರಾ, ಎತ್ತಿನಹೊಳೆ ಚಿತ್ರದುರ್ಗ ಭಾಗದಲ್ಲಿ ಅಪ್ಪರ್ ಭದ್ರಾ, ತುಂಗಾ ತಿರುವು ಯೋಜನೆಯಡಿ ನೀರು ಬರುತ್ತಿರುವುದು ಪರಮಪೂಜ್ಯರ ದೂರದೃಷ್ಟಿ. ೧೯೯೮ರಲ್ಲಿ ಎಳೆಯ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ಪಟ್ಟನಾಯಕನಹಳ್ಳಿ ಮಠದ ಕಾರ್ಯಭಾರ ವಹಿಸಿಕೊಂಡ ತರುವಾಯದಲ್ಲಿ ಈ ಭಾಗದ ಜನರ, ರೈತರ ಕೊರಳ ದನಿಗೆ ಶಕ್ತಿಯಾಗಿ ನಿಂತು ತಮ್ಮ ಕಾರ್ಯವೈಖರಿ ಬಗ್ಗೆ ಜನರಲ್ಲಿ ವಿಶ್ವಾಸ ತಂದರು. ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರ ಅಡಳಿತ ಅವಧಿಯಲ್ಲಿ ಶ್ರೀಗಳು ತೋರಿದ ನೀರಾವರಿ ಕನಸು ನನಸಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರಿಗಾಗಿ ನಂಜಾವಧೂತ ಶ್ರೀಗಳ ನೀರಾವರಿ ಹಕ್ಕೊತ್ತಾಯದ ಸಮಾವೇಶ ನಿಜಕ್ಕೂ ಬಯಲುಸೀಮೆಯ ಭಾಗ್ಯವೇ ಸರಿ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ